

ವಿಜಯವಾಣಿ ಸುದ್ದಿಜಾಲ ಉಳ್ಳಾಲ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯುವ ಮೂಲಕ ಅವರ ಕುಟುಂಬ, ಸಮುದಾಯ ಮಾತ್ರವಲ್ಲದೆ ತಾನು ಪ್ರತಿನಿಧಿಸುತ್ತಿರುವ ಉಳ್ಳಾಲ ಕ್ಷೇತ್ರ ಹಾಗೂ ದ.ಕ. ಜಿಲ್ಲೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯುವಂತೆ ಮಾಡಿರುವ ಸಿಂಧೂರ ರಾಜ ವಿದ್ಯಾರ್ಥಿಗಳಿಗೆ ಪ್ರೇರಣೆ ಎಂದು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು. ವೈಜ್ಞಾನಿಕ ಆವಿಷ್ಕಾರಕ್ಕಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಧಾನಮಂತ್ರಿ ಬಾಲ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ ಉಳ್ಳಾಲ ಮೊಗವೀರ ಪಟ್ಣದ ವಿದ್ಯಾರ್ಥಿನಿ ಸಿಂಧೂರ ರಾಜ ಅವರನ್ನು ಉಳ್ಳಾಲ ಪತ್ರಕರ್ತರ ಸಂಘ ವತಿಯಿಂದ ಶುಕ್ರವಾರ ತಿಂಗಳ-ಬೆಳಕು, ಗೌರವ-ಅತಿಥಿ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಸಿಂಧೂರ ರಾಜ ಮಾತನಾಡಿ, ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿ ಪ್ರಗತಿಪರ ಯೋಜನೆ ರೂಪಿಸುವ ಉದ್ದೇಶವಿದ್ದು, ಗ್ರಾಮೀಣ ಕರ್ನಾಟಕ ಮತ್ತು ಭಾರತದ ದುರ್ಬಲ ವರ್ಗದ ಪಾರ್ಕಿನ್ಸನ್ ರೋಗಿಗಳಿಗೆ ಕೈಗೆಟುಕುವ ಚಿಕಿತ್ಸಾ ಸಾಧನಗಳನ್ನು ಅಭಿವೃದ್ಧಿಪಡಿಸಿ ಭವಿಷ್ಯದಲ್ಲಿ ವಿಶ್ವಾದ್ಯಂತ ವಿಸ್ತರಿಸುವ ಉದ್ದೇಶವಿದೆ. ಈಗಾಗಲೇ ನನ್ನ ಆವಿಷ್ಕಾರ ಪ್ರೋಟೋಟೈಪ್ ಹಂತದಲ್ಲಿದ್ದು, ಶೀಘ್ರದಲ್ಲೇ ಸಂಪೂರ್ಣ ಉತ್ಪನ್ನವಾಗಿ ಮಾರ್ಪಡಿಸುವ ಯೋಜನೆ ಹೊಂದಿದ್ದೇನೆ ಎಂದರು. ಶಿಬಾನಿ ರಾಜಾ, ಬಾಬು ಬಂಗೇರ, ಶಶಿಕಾಂಥಿ, ಮಾರ್ಗದರ್ಶಕರಾದ ಪ್ರಶಾಂತ್ ಅಂಚನ್, ದೇವಕಿ ಆರ್.ಉಳ್ಳಾಲ್, ಮನೋಜ್ ಬಂಗೇರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಮೋಹನ್ ಕುತ್ತಾರು, ಉಳ್ಳಾಲ ತಾಲೂಕು ಘಟಕ ಉಪಾಧ್ಯಕ್ಷರಾದ ದಿನೇಶ್ ನಾಯಕ್, ಆರ್ೀ ಯು.ಆರ್., ಕಾರ್ಯದರ್ಶಿಗಳಾದ ವಜ್ರ ಗುಜರನ್, ಡಾ.ಸತೀಶ್ ಕೊಣಾಜೆ, ಕೋಶಾಧಿಕಾರಿ ಬಶೀರ್ ಕಲ್ಕಟ್ಟ, ಕಾರ್ಯಕಾರಿ ಸಮಿತಿ ಸದಸ್ಯರಾದ ಆಸ್ಿ ಬಬ್ಬುಕಟ್ಟೆ, ಸುಪ್ರೀತ್ ಇರಾ ಮೊದಲಾದವರು ಉಪಸ್ಥಿತರಿದ್ದರು. ವಸಂತ್ ಎನ್.ಕೊಣಾಜೆ ಅತಿಥಿಗಳನ್ನು ಪರಿಚಯಿಸಿದರು. ಶಶಿಧರ ಪೊಯ್ಯತ್ತಬೈಲು ನಿರೂಪಿಸಿದರು.
ಮಕ್ಕಳು ಈ ರೀತಿಯ ಆಲೋಚನೆ, ಯೋಜನೆಯಲ್ಲಿ ಯಶಸ್ವಿಯಾಗಲು ಪಾಲಕರು ಮತ್ತು ಕುಟುಂಬಸ್ಥರ ಪ್ರೋತ್ಸಾಹ ಕಾರಣವಾಗಿದೆ. ಸಿಂಧೂರ ತನ್ನ ಮೊದಲ ಹೆಜ್ಜೆಯಲ್ಲೇ ದೊಡ್ಡ ಯಶಸ್ಸು ಪಡೆದಿದ್ದು, ದೊಡ್ಡ ಹೆಜ್ಜೆ ಇಡಲು ಆಕೆಗೆ ಎಲ್ಲ ಅವಕಾಶಗಳಿವೆ. ಮುಂದಿನ ದಿನಗಳಲ್ಲಿ ಆಕೆ ರಾಷ್ಟ್ರಕ್ಕೆ ಕೀರ್ತಿ ತರುವ ಹೊಸ ಆವಿಷ್ಕಾರ ಮಾಡುವಂತಾಗಲಿ. ಯು.ಟಿ.ಖಾದರ್, ಸ್ಪೀಕರ್