ಹಗ್ಗ ಕಟ್ಟಿ ಲಾರಿ ಎಳೆದು ಪ್ರತಿಭಟನೆ; ಇಂಧನ ಬೆಲೆ ಏರಿಕೆಗೆ ಪ್ರಗತಿಪರ ಸಂಘಟನೆಗಳಿಂದ ಆಕ್ರೋಶ

23062020 Sindhanoor Protest
Published on

ಸಿಂಧನೂರು : ಮೇಲಿಂದ ಮೇಲೆ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ ಕ್ರಮ ಖಂಡಿಸಿ ಪ್ರಗತಿಪರ ಸಂಘಟನೆ ಮುಖಂಡರು ಮಂಗಳವಾರ ಒಂದು ಕಿಮೀವರೆಗೆ ಹಗ್ಗದಿಂದ ಲಾರಿ ಎಳೆದು ಪ್ರತಿಭಟಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್‌ಗೆ 41 ಡಾಲರ್ ಇದೆ. ಒಂದು ಬ್ಯಾರಲ್ ಕಚ್ಚಾತೈಲ ಸಂಸ್ಕರಿಸಿದರೆ ಪೆಟ್ರೋಲ್, ಡಿಸೇಲ್ ಬೆಲೆ 22-25 ರೂ. ಆಗುತ್ತದೆ. ಅಬಕಾರಿ ಮತ್ತು ಆಮದು ಸುಂಕ, ರಾಜ್ಯದ ವ್ಯಾಟ್ ಸೇರಿ 80 ರೂ. ಗಡಿ ದಾಟಿದೆ. 6 ತಿಂಗಳಲ್ಲಿ ಕಚ್ಚಾತೈಲದ ಬೆಲೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸತತ ಇಳಿಕೆ ಕಂಡಿದೆ. ಇದರಿಂದ ಸರ್ಕಾರ, ಖಾಸಗಿ ಇಂಧನ ಕಂಪನಿಗಳೀಗೆ 2.5 ಲಕ್ಷ ಕೋಟಿ ರೂ. ಲಾಭ ಸಿಕ್ಕಿದೆ. ಆದರೂ ಬೆಲೆ ಏರಿಕೆ ನಿರಂತರವಾಗಿದೆ ಎಂದು ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಲಾಗಿದೆ.

ಕೂಡಲೇ ಪೆಟ್ರೋಲ್, ಡಿಸೇಲ್ ಬೆಲೆ ಇಳಿಸಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು. ಇಂಧನ ಬೆಲೆಯನ್ನು ಮುಕ್ತ ಮಾರುಕಟ್ಟೆಗೆ ಬಿಡದೆ ಕೇಂದ್ರ ಸರ್ಕಾರವೇ ನಿರ್ಧರಿಸಬೇಕು. ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ ತಿದ್ದುಪಡಿ ಕೈಬಿಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net