

ಸಿಂಧನೂರು: ಕನ್ನಡ ನಾಡು-ನುಡಿ ರಕ್ಷಣೆ ಸಂಘಟನೆಯ ಹೊಣೆಗಾರಿಕೆ ಜತೆಗೆ ಭಾಷೆಯ ಸ್ವಾಭಿಮಾನ ಹೆಚ್ಚಿಸಿಕೊಳ್ಳಬೇಕು ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ಹೇಳಿದರು.
ನಗರದ ಸ್ತ್ರೀಶಕ್ತಿ ಭವನದ ಆವರಣದಲ್ಲಿ ಶನಿವಾರ ಪುನೀತ್‌ರಾಜಕುಮಾರ ವೇದಿಕೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಪರ ಸಂಘಟನೆಗಳ ಒಕ್ಕೂಟ) ಆಯೋಜಿಸಿದ್ದ ಕನ್ನಡಮ್ಮನ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊದಲು ನಾವು ಮಾತೃ ಭಾಷೆಯನ್ನು ಗೌರವಿಸಬೇಕು. ಕನ್ನಡ ರಾಜ್ಯೋತ್ಸವವನ್ನು ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಪ್ರತಿಬಿಂಬಿಸುವ ರೀತಿಯಲ್ಲಿ ರಚನಾತ್ಮಕವಾಗಿ ಆಚರಿಸಬೇಕು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ, ಕನ್ನಡ ನಾಡು-ನುಡಿಗೆ ಧಕ್ಕೆ ಬಾರದಂತೆ ಎಚ್ಚರವಹಿಸುವ ಕೆಲಸವಾಗಬೇಕು. ಆ ನಿಟ್ಟಿನಲ್ಲಿ ಕರವೇ ಕಾರ್ಯನಿರ್ವಹಿಸಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ರಂಭಾಪುರಿ ಶಾಖಾಮಠದ ಸೋಮನಾಥ ಸ್ವಾಮೀಜಿ ಮಾತನಾಡಿ, ಕರವೇ ಉಚಿತ ಆರೋಗ್ಯ ಶಿಬಿರ ಸೇರಿ ಇತರ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಇತರ ಸಂಘಟನೆಗಳಿಗಿಂತ ಭಿನ್ನವಾಗಿದೆ ಎಂದರು.
ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಕರವೇ ಜಿಲ್ಲಾಧ್ಯಕ್ಷ ವಿನೋದರಡ್ಡಿ ಮಾತನಾಡಿದರು. ತಾಲೂಕು ನ್ಯಾಯವಾದಿಗಳ ಸಂಘದ ಮಾಜಿ ಅಧ್ಯಕ್ಷ ರಾಯಪ್ಪ ವಕೀಲ, ಕನಕ ಯುವ ಸೇನೆ ಮಾಜಿ ಅಧ್ಯಕ್ಷ ಹನುಮೇಶ ಬಾಗೋಡಿ, ನಗರಸಭೆ ಸದಸ್ಯರಾದ ಸತ್ಯನಾರಾಯಣ, ಚಂದ್ರಶೇಖರ ಮೈಲಾರ, ಕರವೇ ತಾಲೂಕು ಅಧ್ಯಕ್ಷ ಗಂಗಣ್ಣ, ಖಾದರವಲಿ, ಛತ್ರಪ್ಪ ಕುರುಕುಂದಿ, ಅನು ಬೇರ‌್ಗಿ, ಇಂದಿರಾಗಾಂಧಿ ಸ್ತ್ರೀಶಕ್ತಿ ಸಂಘದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ, ಮರಿಯಪ್ಪ ಬಂಡಿ, ಮರಿಯಪ್ಪ ಭಜಂತ್ರಿ ಇತರರಿದ್ದರು.
ಕನ್ನಡ ಕೋಗಿಲೆ ಖ್ಯಾತಿ ಅರ್ಜುನ್ ಇಟಗಿ, ಕುಚುಪುಡಿ ಡ್ಯಾನ್ಸರ್ ಮಯೂರಿ ಬಸವರಾಜ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಶಿಕ್ಷಕ ವೀರೇಶ ಗೋನ್ವಾರ, ಕಲಾವಿದ ಬಸವರಾಜ ಗಸ್ತಿ ನಿರೂಪಿಸಿದರು.