

ಸಿಂಧನೂರು: ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ರೈತರು ನಡೆಸಿರುವ ಹೋರಾಟ ಬೆಂಬಲಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ತಾಲೂಕು ಘಟಕ ಶುಕ್ರವಾರ ಪ್ರತಿಭಟನೆ ನಡೆಸಿತು.
ರೈತ ವಿರೋಧಿ, ಜನವಿರೋಧಿ ವಿದ್ಯುತ್ ಮಸೂದೆಯನ್ನು ಹಿಂಪಡೆಯಲು ಒತ್ತಾಯಿಸಿ ದೇಶದ ರೈತ ಸಮೂಹ ನಡೆಸುತ್ತಿರುವ ಹೋರಾಟ ತೀವ್ರವಾಗುತ್ತಿದೆ. ಇದರಂತೆ ಬಂಡವಾಳಗಾರರ ಪರವಾಗಿರುವ 4 ಕಾರ್ಮಿಕ ಸಂಹಿತೆ ರದ್ದುಪಡಿಸುವಂತೆ ರಾಷ್ಟ್ರಾದ್ಯಂತ ಸಿಐಟಿಯು ಹೋರಾಡುತ್ತಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ರೈತರ ಷರತ್ತುಗಳಿಗೆ ಒಪ್ಪದೆಯೆ, ಕಾರ್ಪೋರೇಟ್ ಕಂಪನಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.
ಕೃಷಿ ಕಾಯ್ದೆ, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ವಿದ್ಯುತ್ ಮಸೂದೆ-2020ಅನ್ನು ಹಿಂದಕ್ಕೆ ಪಡೆಯಬೇಕು. ಎಲ್ಲ ರೀತಿಯ ಖಾಸಗೀಕರಣ ನಿಲ್ಲಿಸಬೇಕು. ಆದಾಯ ತೆರಿಗೆ ಮಿತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ ಮಾಸಿಕ 7500 ರೂ. ವರ್ಗಾಯಿಸಬೇಕು. ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 10 ಕೆಜಿ ಆಹಾರ ಧಾನ್ಯಗಳನ್ನು ಉಚಿತವಾಗಿ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ವಾರ್ಷಿಕ 200 ದಿನಗಳ ಕೆಲಸ ನೀಡಿ, ದಿನಕ್ಕೆ 700 ರೂ. ಕೂಲಿ ನೀಡಬೇಕು. ಈ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಸಮುದಾಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಸಿಐಟಿಯು ಅಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಯಂಕಪ್ಪ ಕೆಂಗಲ್, ಉದ್ಯೋಗ ಖಾತ್ರಿ ಯೋಜನೆ ಜಾರಿ ಸಮಿತಿ ಅಧ್ಯಕ್ಷ ಗೇಸುದರಾಜ, ಕಾರ್ಯದರ್ಶಿ ಗರೀಬ್‌ಸಾಬ್, ಖಜಾಂಚಿ ಚಿದಾನಂದ, ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘ ತಾಲೂಕು ಘಟಕದ ಅಧ್ಯಕ್ಷೆ ವಿಶಾಲಾಕ್ಷಮ್ಮ, ಕಾರ್ಯದರ್ಶಿ ಶರಣಮ್ಮ ಪಾಟೀಲ್, ಮುಖಂಡರಾದ ಚಿದಾನಂದ, ಮಹೆಬೂಬ್‌ಸಾಬ್, ರಾಮಣ್ಣ ತುರ್ವಿಹಾಳ, ಸಿದ್ದಪ್ಪ, ದೊಡ್ಡ ಮಾರೆಪ್ಪ, ಸಿದ್ದಪ್ಪ ತುರ್ವಿಹಾಳ, ಈರಪ್ಪ, ಶಂಕ್ರಪ್ಪ, ದೇವಪ್ಪ, ಎಚ್.ಅಳಪ್ಪ, ಸರ್ದಾರ್‌ಸಾಬ್, ಕನಕಪ್ಪ, ಹೊನ್ನೂರಪ್ಪ, ಎಂ.ಮುನಿಸ್ವಾಮಿ, ವೆಂಕಟೇಶ, ಅನ್ವರಪಾಷಾ, ಶರಣಪ್ಪ, ಯಂಕಪ್ಪ ಇದ್ದರು.