

ಸಿಂಧನೂರು: ನಗರದಲ್ಲಿ ಸಂಚಾರ ದಟ್ಟಣೆ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಸಂಚಾರ ದಟ್ಟಣೆಯಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಇದನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಹಾಗೂ ನಗರಸಭೆ ಕ್ರಮಕೈಗೊಳ್ಳುತ್ತಿವೆ.
ನಗರದ ಹೆದ್ದಾರಿಯಲ್ಲಿ ನಿಲ್ಲುವ ವಾಹನಗಳು ಹಾಗೂ ಬೀದಿ ಬದಿ ಬಂಡಿಗಳಿಂದ ಸಂಚಾರಕ್ಕೆ ಹೆಚ್ಚಿನ ಸಮಸ್ಯೆಯಾಗುತ್ತಿದೆ. ಅದರಲ್ಲೂ ಸೋಮವಾರ ಮತ್ತು ಮಂಗಳವಾರ ಬಸ್ ನಿಲ್ದಾಣದಿಂದ ಅಶೋಕಭವನದವರೆಗೆ, ಗಂಗಾವತಿ, ಕುಷ್ಟಗಿ ಸಂಪರ್ಕ ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ಕಳೆದ ಐದಾರು ವರ್ಷದಿಂದಲೂ ವಾಹನ ದಟ್ಟಣೆ ದಿನೇ ದಿನೆ ಹೆಚ್ಚಿದೆ. ಇದರಿಂದ ಪದೇ ಪದೆ ಅಪಘಾತಗಳು ನಡೆಯುತ್ತಿದ್ದು, ಈಗಾಗಲೇ ಐದಾರು ಜನ ಜೀವ ಕಳೆದುಕೊಂಡಿದ್ದಾರೆ.
ನಗರದಲ್ಲಿ ಎಪಿಎಂಸಿಯಿಂದ ಗಾಂಧಿವೃತ್ತ, ರಾಯಚೂರು, ಗಂಗಾವತಿ ಹೆದ್ದಾರಿಯಲ್ಲಿ ಹಾಗೂ ಹಳೆಯ ಬಜಾರ್‌ದಲ್ಲಿ ಕಾರು, ಲಾರಿ, ದ್ವಿಚಕ್ರ ವಾಹನಗಳು ಎಲ್ಲೆಂದರಲ್ಲಿಯೇ ನಿಲುಗಡೆ ಮಾಡುತ್ತಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.
ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸ್ ಇಲಾಖೆ ಹಾಗೂ ನಗರಸಭೆಯು ದಿಟ್ಟ ಕ್ರಮಕ್ಕೆ ಮುಂದಾಗಿದೆ.
ಶಾಸಕ ಹಂಪನಗೌಡ ಬಾದರ್ಲಿ ಸೂಚನೆ ಮೇರೆಗೆ ಕಳೆದ ಐದಾರು ದಿನಗಳಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿರುವ ಸ್ಥಳದಲ್ಲಿ ವಾಹನ ಹಾಗೂ ಬಂಡಿಗಳು ನಿಲ್ಲದಂತೆ ಎಚ್ಚರ ವಹಿಸಲಾಗುತ್ತಿದೆ. ಆಟೋದಲ್ಲಿ ಧ್ವನಿ ವರ್ಧಕ ಅಳವಡಿಸಿ, ಜಾಗೃತಿ ಮೂಡಿಸಲಾಗುತ್ತಿದೆ. ಪ್ರಮುಖ ಮಾರ್ಗದಲ್ಲಿ ಯರ‌್ರಾಬಿರ‌್ರಿಯಾಗಿ ವಾಹನ ನಿಲ್ಲಿಸಿದರೆ ದಂಡದ ಪ್ರಯೋಗ ಮಾಡಲಾಗುತ್ತಿದೆ. ಬಸ್ ನಿಲ್ದಾಣದ ಮುಖ್ಯ ರಸ್ತೆಯಲ್ಲಿ ಗಾಂಧಿವೃತ್ತ, ಅಶೋಕ ಭವನದಲ್ಲಿ ಸಂಚಾರ ದಟ್ಟಣೆ ಆಗದಂತೆ ಎಚ್ಚರ ವಹಿಸುತ್ತಿದೆ.
ಸುಕಾಲಪೇಟೆ ರಸ್ತೆ, ರಾಯಚೂರು, ಗಂಗಾವತಿ, ಬಸ್ ನಿಲ್ದಾಣ, ಕುಷ್ಟಗಿ ಮಾರ್ಗದಲ್ಲಿ ಒಂದು ಕಡೆ ಮಾತ್ರ ವಾಹನ ನಿಲುಗಡೆಯಾಗಬೇಕು. ಇನ್ನೊಂದು ಮಾರ್ಗದಲ್ಲಿ ಸುಗಮ ಸಂಚಾರ ಇರಬೇಕೆಂಬ ನಿಯಮ ಇದೆ. ಪೊಲೀಸ್ ಇಲಾಖೆಯೊಂದಿಗೆ ನಗರಸಭೆಯು ಕೈ ಜೋಡಿಸಿದೆ. ಇದರಿಂದ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆಂಬ ಆಶಾಭಾವನೆ ಹೆಚ್ಚಿದೆ.