

ವಿಜಯವಾಣಿ ವಿಶೇಷ ಸಿಂಧನೂರು
ನಗರದ ವಿವಿಧ ವಾರ್ಡ್‌ಗಳಿಗೆ ಹತ್ತು ದಿನ ಕಳೆದರೂ ನೀರು ಪೂರೈಕೆ ಇಲ್ಲ. ಈಗ ಕೆರೆ ನೀರು ಬತ್ತುತ್ತಿದ್ದು, ನಗರಸಭೆಗೆ 31 ವಾರ್ಡ್‌ಗಳಿಗೆ ನೀರು ಪೂರೈಕೆ ಮಾಡುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಇದೇ ಮೊದಲ ಬಾರಿಗೆ ನೀರಿನ ಸಮಸ್ಯೆ ಜಟಿಲವಾಗಿದೆ. ತುಂಗಭದ್ರಾ ಜಲಾಶಯದಲ್ಲಿ ನೀರು ಇಲ್ಲದೆ ಇರುವುದರಿಂದ, ನಗರದ ಜನತೆ ತಾತ್ವರ ಪಡುವಂತಾಗಿದೆ. ಜಲಾನಯ ವ್ಯಾಪ್ತಿಯಲ್ಲಿ ಮಳೆಯಾಗಿ ಜಲಾಶಯ ಭರ್ತಿಯಾದರೆ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ.
ಮಳೆರಾಯ ಮುನಿಸು ತೋರಿದರೆ ಜನರು ನೀರಿಗೆ ಪರಿತಪಿಸುವಂತಾಗುತ್ತದೆ. ಇದಲ್ಲದೆ 10 ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವುದರಿಂದ, ಮನೆಗಳಲ್ಲಿ ಬಡಜನರು ನೀರು ಸಂಗ್ರಹಿಸಿಟ್ಟುಕೊಳ್ಳುವುದು ಸವಾಲಾಗಿದೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಹತ್ತು ದಿನಗಳು ಮುಗಿದಿದ್ದು ಇನ್ನೂ ನೀರು ಬಂದಿಲ್ಲ. ಇನ್ನೇರಡ್ಮೂರು ದಿನ ನೀರು ಬರುವುದು ಅನುಮಾನ ಎನ್ನಲಾಗಿದೆ.
ತಾಲೂಕಿನ ತುರ್ವಿಹಾಳ ಹತ್ತಿರ ನಿರಂತರ ಕುಡಿಯುವ ನೀರಿನ ಯೋಜನೆಯಡಿ ಸಂಪೂರ್ಣ ಕೆರೆ ನಿರ್ಮಾಣ ಮಾಡಿಲ್ಲ. ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಕುಡಿಯುವ ನೀರಿನ ಕೆರೆ ಒಡೆದು ಎರಡು ವರ್ಷವಾದರೂ ದುರಸ್ತಿ ಕೈಗೊಳ್ಳದಿದ್ದರಿಂದ ಸಂಪೂರ್ಣ ನೀರು ಭರ್ತಿ ಸಾಧ್ಯವಾಗಿಲ್ಲ.
ಕೆರೆ ದುರಸ್ತಿಯಾಗದೆ ಇರುವುದರಿಂದ ಕಡಿಮೆ ಪ್ರಮಾಣದಲ್ಲಿ ನೀರು ಭರ್ತಿ ಮಾಡಲಾಗುತ್ತಿದೆ. ಈ ಬಾರಿ ತುಂಗಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮಳೆಯಾಗದಿದ್ದರೆ ಜನರು ನೀರಿಗಾಗಿ ಸಮಸ್ಯೆ ಎದುರಿಸಬೇಕಿದೆ.
ತುರ್ವಿಹಾಳ ಪಟ್ಟಣದ ಹತ್ತಿರದ ಕೆರೆ ಮತ್ತು ನಗರದ ಕುಷ್ಟಗಿ ರಸ್ತೆಯಲ್ಲಿರುವ ಎರಡು ಕೆರೆಗಳಲ್ಲಿ ನೀರು ಇದೆ. ಸದ್ಯ ಮುಖ್ಯ ಜಲಸಂಗ್ರಹಗಾರ (ದೊಡ್ಡ ಕೆರೆ)ದಲ್ಲಿ 75.00 ಎಂ.ಎಲ್.ಡಿ ನೀರು, ಸಣ್ಣ ಕೆರೆಯಲ್ಲಿ 77.18 ಎಂ.ಎಲ್.ಡಿ ನೀರು, ತುರ್ವಿಹಾಳ ಹತ್ತಿರದ ಎ.ಡಿ.ಬಿ ಯೋಜನೆಯ ಕೆರೆಯಲ್ಲಿ 590 ಎಂ.ಎಲ್.ಡಿ ನೀರು ಸೇರಿ ಒಟ್ಟು 680 ಎಂ.ಎಲ್.ಡಿ ನೀರು ಸಂಗ್ರಹವಿದೆ.
ಮೂರು ಕೆರೆಗಳು ಸೇರಿ 2969.16 ಎಂ.ಎಲ್.ಡಿ ನೀರು ಸಂಗ್ರಹಣಾ ಸಾಮರ್ಥ್ಯವಿದ್ದು, ಸದ್ಯ 680 ಎಂ.ಎಲ್.ಡಿ ಮಾತ್ರ ಬಾಕಿ ಉಳಿದಿದೆ. ಇದರಲ್ಲಿ 135 ಎಂ.ಎಲ್.ಡಿ ಆವಿಯಾಗುವುದು ಎಂದು ಪರಿಗಣಿಸಿದ್ದು, ಉಳಿಕೆಯಾದ 544 ಎಂ.ಎಲ್.ಡಿ ನೀರನ್ನೇ ಬಳಸಬೇಕಿದೆ. ನಗರಕ್ಕೆ ಪ್ರತಿ ದಿನ 16 ಎಂ.ಎಲ್.ಡಿ ನೀರಿನ ಅವಶ್ಯಕತೆ ಇದೆ.
ರುಟೇಷನ್ ಆಧಾರದಲ್ಲಿ ವಾರ್ಡ್‌ಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಉಳಿದ ನೀರನ್ನೇ ಸದ್ಬಳಕೆ ಮಾಡಿಕೊಳ್ಳಬೇಕಿದೆ. ಸದ್ಯ ಮೇ 31 ರೊಳಗೆ ನೀರು ಲಭ್ಯವಾಗುವ ಲಕ್ಷಣ ಇದ್ದು, ಜನರು ನೀರನ್ನು ಅನವಶ್ಯಕವಾಗಿ ಪೋಲು ಮಾಡದೆ ನೀರು ಉಳಿಕೆ ಮಾಡಬೇಕು. ಇಲ್ಲವಾದರೆ ನೀರಿಲ್ಲದೆ ಸಮಸ್ಯೆ ಎದುರಿಸುವ ನಿಚ್ಚಳವಾಗಿದೆ.
ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಿಗೆ ಈಗಾಗಲೇ ತಿಳಿಸಿದಂತೆ ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುವುದು. ಕೆರೆಯಲ್ಲಿ ಸಂಗ್ರಹವಾಗಿರುವ ನೀರು ಇನ್ನೂ ಎರಡು ವಾರ ಆಗಲಿದ್ದು , ಖಾಸಗಿ ಕೆರೆಗಳಿಂದ ನೀರು ಪಡೆದು ಸಮಸ್ಯೆ ಸರಿಪಡಿಸಲಾಗುವುದು. ಸಾರ್ವಜನಿಕರು ನೀರು ಮಿತವಾಗಿ ಬಳಕೆ ಮಾಡಬೇಕು.| ಮಂಜುನಾಥ ಗುಂಡೂರು, ನಗರಸಭೆ ಪೌರಾಯುಕ್ತ, ಸಿಂಧನೂರು.