ಮೂರು ದಶಕದಿಂದ ಹೋರಾಟ

Untitled design (3)
ಬಂದ್ ಹಿನ್ನೆಲೆಯಲ್ಲಿ ಸಿಂಧನೂರಿನಲ್ಲಿ ಬಸ್ ನಿಲ್ದಾಣ ಪ್ರಯಾಣಿಕರು, ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು.
Published on

ಸಿಂಧನೂರು: ಒಳಮೀಸಲಾತಿ ಅನುಷ್ಠಾನಗೊಳಿಸಿ ಅಂಗೀಕರಿಸುವಂತೆ ಒತ್ತಾಯಿಸಿ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿ ರಾಯಚೂರು ಜಿಲ್ಲೆ ಬಂದ್‌ಗೆ ಗುರುವಾರ ಪಟ್ಟಣದಲ್ಲಿ ಯಶಸ್ವಿಗೊಂಡಿತು.

ಧನೂರು ಬಂದ್ ಹಿನ್ನೆಲೆಯಲ್ಲಿ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಿದ್ದರು. ರಾಯಚೂರು, ಗಂಗಾವತಿ, ಕುಷ್ಟಗಿ ಹಾಗೂ ಮಸ್ಕಿ ಮಾರ್ಗದ ರಸ್ತೆಯ ಅಂಗಡಿ ಮುಂಗಟ್ಟುಗಳು, ಹಳೇ ಬಜಾರ್, ಎಪಿಎಂಸಿ ಮಾರುಕಟ್ಟೆ ಪ್ರದೇಶ ಅಂಗಡಿಗಳು ಬೆಳಿಗ್ಗೆಯಿಂದಲೇ ಸ್ಥಗಿತಗೊಂಡಿದ್ದವು. ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಯಚೂರು, ಗಂಗಾವತಿ, ಮಸ್ಕಿ ಹಾಗೂ ಕುಷ್ಟಗಿ ಮಾರ್ಗದ ರಸ್ತೆಯ ಹೊರ ಭಾಗದಲ್ಲಿ ಪೊಲೀಸರು ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಿದ್ದು ಕಂಡುಬಂತು.

ನಗರದ ತಹಸಿಲ್ ಕಚೇರಿ ಮುಂಭಾಗದಲ್ಲಿ ಒಳಮೀಸಲಾತಿ ಜಾರಿಗಾಗಿ ಐಕ್ಯ ಹೋರಾಟ ಸಮಿತಿಯಿಂದ ಬಹಿರಂಗ ಸಭೆ ಆಯೋಜಿಸಿರುವ ಹಿನ್ನೆಲೆಯಲ್ಲಿ ಟೆಂಟ್‌ಗೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಬಸ್ ನಿಲ್ದಾಣ ಸೇರಿ ಅಲ್ಲಲ್ಲಿ ಡಿಆರ್ ವಾಹನ ವ್ಯವಸ್ಥೆ ಮಾಡಲಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಬೆಳಿಗ್ಗೆಯಿಂದಲೇ ಸಾರಿಗೆ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಹೀಗಾಗಿ ಬಸ್ ನಿಲ್ದಾಣ ಹಾಗೂ ಆವರಣದಲ್ಲಿ ಪ್ರಯಾಣಿಕರಿಲ್ಲದೇ ಬಿಕೋ ವಾತಾವರಣ ಕಂಡುಬಂತು. ಬಹುತೇಕ ಶಾಲಾ-ಕಾಲೇಜ್‌ಗಳಿಗೆ ರಜೆ ನೀಡಲಾಗಿದೆ. ಕೆಲ ಕಾಲೇಜ್‌ಗಳಿಗೆ ರಜೆ ನೀಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಬಸ್‌ಗಾಗಿ ಕಾದು ಕಾದು ಸುಸ್ತಾದರು. ಕೊನೆಗೆ ಆಟೋ, ಕ್ರೂಷರ್‌ಗಳಲ್ಲಿ ತಮ್ಮೂರಿಗೆ ತೆರಳಿದರು.

ಒಳಮೀಸಲಾತಿ ಜಾರಿಗಾಗಿ ಕಳೆದ ಮೂರು ದಶಕದಿಂದಲೂ ಹೋರಾಟ ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣೆ ಸಂದರ್ಭದಲ್ಲಿ ಒಳಮೀಸಲಾತಿ ಜಾರಿ ಮಾಡುವ ಭರವಸೆ ನೀಡಿ, ಈಗ ಮೌನವಹಿಸಿದ್ದಾರೆ. ವಿನಾಕಾರಣ ವಿಳಂಬ ಧೋರಣೆ ಶರಣಾಗಿದ್ದಾರೆ. ಈ ಕೂಡಲೇ ಒಳ ಮೀಸಲಾತಿ ನೀತಿಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಿ ಐತಿಹಾಸಿಕ ನಿರ್ಧಾರಕ್ಕೆ ಸರ್ಕಾರ ದೇಶದಲ್ಲಿಯೇ ಮಾದರಿಯಾಗಲಿದೆ ಎಂದು ಪ್ರತಿಭಟನೆ ನಿರತರು ಒತ್ತಾಯಿಸಿದರು.

ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ ಸಿಂಧನೂರ್ ಬಂದ್‌ಗೆ ಬೆಂಬಲಿಸಿ, ಮಾತನಾಡಿದರು. ಸಂಚಾಲಕ ಮರಿಯಪ್ಪ ಜಾಲಿಹಾಳ, ಯಮನಪ್ಪ ಬಿಎಸ್‌ಎನ್‌ಎಲ್, ಪ್ರಮುಖರಾದ ಆರ್.ಬೋನ್‌ವೆಂಚರ್, ಬಾಲಸ್ವಾಮಿ ಕೊಡ್ಲಿ, ಕರಿಯಪ್ಪ ಗುಡಿಮನಿ, ಎಚ್.ಎನ್.ಬಡಿಗೇರ, ಮಂಜುನಾಥ ಗಾಂಧಿನಗರ, ಅಲ್ಲಮಪ್ರಭು ಪೂಜಾರ,ಮರಿಯಣ್ಣ ಜಾಲಿಹಾಳ, ಆರ್.ಅಂಬ್ರೂಸ್, ಅಮರೇಶ ಗಿರಿಜಾಲಿ, ಮಹಾದೇವ ದುಮತಿ, ರಾಮಣ್ಣ ಸಾಸಲಮರಿ, ಸಿದ್ದಪ್ಪ, ಮೌಲಪ್ಪ ಐಹೊಳೆ, ಮೌನೇಶ ಜಾಲವಾಡಗಿ, ಶಿವರಾಜ ಉಪ್ಪಲದೊಡ್ಡಿ ಇತರ ದಲಿತಪರ ಸಂಘಟನೆಗಳು, ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net