ರೈತರನ್ನು ಸಾಲದ ಸುಳಿಯಿಂದ ರಕ್ಷಿಸಿ

27112022 sindhanour formars appeel
Published on

ಸಿಂಧನೂರು: ದೆಹಲಿ ಹೋರಾಟದ ಎರಡನೇ ವರ್ಷಾಚರಣೆ ಹಿನ್ನೆಲೆಯಲ್ಲಿ, ಸಂಯುಕ್ತ ಹೋರಾಟ ಕರ್ನಾಟಕ ಹಾಗೂ ರೈತ ವಿರೋಧಿ ಕೃಷಿ ಕಾನೂನುಗಳ ರದ್ಧತಿ ಹೋರಾಟ ಸಮಿತಿ ತಾಲೂಕು ಘಟಕದಿಂದ ನಗರದಲ್ಲಿ ರ‌್ಯಾಲಿ ನಡೆಸಲಾಯಿತು.

ಕೃಷಿ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವ ಕಾರಣ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಎಲ್ಲ ರೈತರ ಸಾಲ ಮನ್ನಾ ಮಾಡಬೇಕು. ವಿದ್ಯುತ್ ತಿದ್ದುಪಡಿ ಮಸೂದೆ 2022 ಹಿಂಪಡೆಯಬೇಕು. ಉತ್ತರ ಪ್ರದೇಶದಲ್ಲಿ ನಾಲ್ವರು ರೈತರು ಮತ್ತು ಪತ್ರಕರ್ತನ ಹತ್ಯೆಯ ಪ್ರಮುಖ ಸಂಚುಕೋರ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿಯನ್ನು ಸಂಪುಟದಿಂದ ವಜಾಗೊಳಿಸಬೇಕು.

ಲಖಿಂಪುರ ಖೇರಿ ಹೋರಾಟದಲ್ಲಿ ಬಂಧಿಯಾಗಿರುವ ರೈತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಹುತಾತ್ಮ ರೈತರ ಕುಟುಂಬಗಳಿಗೆ ಹಾಗೂ ಗಾಯಗೊಂಡ ರೈತರಿಗೆ ಪರಿಹಾರ ನೀಡುವ ಭರವಸೆಯನ್ನು ಸರ್ಕಾರ ಈಡೇರಿಸಬೇಕು. ಅನಾವೃಷ್ಟಿ, ಅತಿವೃಷ್ಟಿ, ರೋಗಗಳಿಂದ ಬೆಳೆಗಳ ನಷ್ಟ ಸರಿದೂಗಿಸಲು ಸರ್ಕಾರ ಬೆಳೆ ವಿಮೆ ಜಾರಿಗೊಳಿಸಬೇಕು. ಎಲ್ಲ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರಿಗೆ ಮಾಸಿಕ 5 ಸಾವಿರ ರೂ. ಪಿಂಚಣಿ ಯೋಜನೆ ಜಾರಿಗೊಳಿಸಬೇಕೆಂದು ಎಂದು ಒತ್ತಾಯಿಸಿದರು.

ಪ್ರಮುಖರಾದ ಶೇಕ್ಷಾ ಖಾದ್ರಿ, ಖಾದರ್ ಸುಬಾನಿ, ವೆಂಕನಗೌಡ ಗದ್ರಟಗಿ, ಎಸ್.ದೇವೇಂದ್ರಗೌಡ, ಬಸವರಾಜ ಬಾದರ್ಲಿ, ಗೋಪಾಲಕೃಷ್ಣ, ಖಾನ್ ಸಾಬ್, ಅಯ್ಯಪ್ಪ, ಶಾಂತಪ್ಪ, ಸಮದ್ ಚೌದ್ರಿ, ಮಂಜುನಾಥ ಗಾಂಧಿನಗರ, ಹಾಜಿಸಾಬ್, ಪಾಂಡುರಂಗ, ಶಂಕರ್ ವಾಲಿಕಾರ್, ಚಿಟ್ಟಿಬಾಬು, ಅಪ್ಪಣ್ಣ ಕಾಂಬ್ಳೆ, ಚಾಂದ್ ಪಾಷಾ ಜಾಗೀರದಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net