

ಸಿಂಧನೂರು: ಅಕ್ರಮವಾಗಿ ಮರಳು ಸಾಗಣೆ ಮಾಡುವ ದಂಧೇಕೋರರನ್ನು ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದಲಿತ ಅಲ್ಪಸಂಖ್ಯಾತ ಶೋಷಿತ ಸಮುದಾಯಗಳ ಒಕ್ಕೂಟ ಒತ್ತಾಯಿಸಿದೆ.
ನಗರದಲ್ಲಿ ಎಸ್‌ಪಿ ಬಿ.ನಿಖಿಲ್‌ಗೆ ಗುರುವಾರ ಮನವಿ ಸಲ್ಲಿಸಿತು. ನೈಸರ್ಗಿಕವಾಗಿ ಸಿಗುವ ಮರಳನ್ನು ರಾತ್ರೋ ರಾತಿ ಅಕ್ರಮವಾಗಿ ಸಾಗಿಸಲಾಗುತ್ತಿದೆ. ಧಂಧೆಕೋರರು ಬಹಿರಂಗವಾಗಿ ಪೋಲಿಸರು, ಅಧಿಕಾರಿಗಳ ಹೆಸರು ಹೇಳಿಕೊಂಡು ಈ ಕೆಲಸ ಮಾಡುತ್ತಿದ್ದಾರೆ. ನಗರದಲ್ಲಿ ಹಗಲೂ ರಾತ್ರಿ ದಂಧೆ ನಡೆಯುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ದಂಧೆಕೋರರನ್ನು ಬಂಧಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅಕ್ರಮ ಮರಳು ತಡೆಯುವವರ ಸೋಗಿನಲ್ಲಿ ಕೆಲವರು ಅವರೊಂದಿಗೆ ಶಾಮೀಲಾಗಿದ್ದಾರೆ. ತನಿಖೆ ನಡೆಸಿ ಕಠಿಣ ಶಿಕ್ಷೆಗೆ ಗುರಿಪಡಿಸಲೇಬೇಕು. ಸಿಂಧನೂರು ವಲಯದ ಕಂದಾಯ ಅಧಿಕಾರಿಗಳು, ಎಲ್ಲ ಪೋಲಿಸ್ ಅಧಿಕಾರಿಗಳು, ಕೆಳ ಹಂತದ ಪೋಲಿಸರ ದೂರವಾಣಿ ಕರೆಗಳ ತನಿಖೆ ನಡೆಸಬೇಕು. ಠಾಣೆ ಸೇರಿ ವಿವಿಧ ಕಚೇರಿಗಳಿಗೆ ದಂಧೆಕೋರರು ಬಂದು ಹೋಗಿರುವ ವಿಡಿಯೋ ದೃಶ್ಯಗಳನ್ನು ಸಂಗ್ರಹಿಸಿ, ಪರಿಶೀಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.