ಮನಸಿನಲ್ಲಿರುವ ಕೊಳಕಿಗೆ ಒಳಿತೇ ಚಿಕಿತ್ಸೆ

270522 Sindhanuru Quranic Discourse Program in Kannada
ಸಿಂಧನೂರಿನಲ್ಲಿ ಆಯೋಜಿಸಿದ್ದ ಕುರಾನ್ ಪ್ರವಚನ ಕಾರ್ಯಕ್ರಮವನ್ನು ಒಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಗುರುವಾರ ಸಂಜೆ ಉದ್ಘಾಟಿಸಿದರು.
Published on

ಸಿಂಧನೂರು: ಜನರ ಮಾನಸಿಕ ರೋಗಗಳಿಗೆ ಒಳಿತಿನ ಮೂಲಕ ಚಿಕಿತ್ಸೆ ನೀಡಬೇಕಾದ ಅನಿವಾರ್ಯತೆಯಿದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್ ಕುಂಞ ಹೇಳಿದರು.

ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಗುರುವಾರ ಸಂಜೆ ಆಯೋಜಿಸಿದ್ದ ಕನ್ನಡದಲ್ಲಿ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಾತಿ, ಧರ್ಮ, ದೇವರು, ದ್ವೇಷ, ಕೋಪ, ಅಸೂಯೆ, ಉಗ್ರವಾದ, ಕೋಮುವಾದಗಳಂತಹ ರೋಗಗಳು ಮನುಷ್ಯನಲ್ಲಿ ಅಡಗಿವೆ. ಹೀಗೆ ಹತ್ತು ಹಲವು ರೋಗಗಳನ್ನು ಹೊತ್ತುಕೊಂಡು ನಾವೆಲ್ಲ ಬದುಕುತ್ತಿದ್ದೇವೆ. ಅವುಗಳನ್ನು ಲ್ಯಾಬ್ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಪರೀಕ್ಷೆ ಮಾಡಿಸುವುದರಿಂದ ಕಂಡು ಹಿಡಿಯಲು ಸಾಧ್ಯವಿಲ್ಲ. ಈ ರೋಗಗಳಿಂದ ನಾವು ಹಾಳಾಗುವುದಲ್ಲದೆ, ಸಮಾಜವನ್ನು ಹಾಳು ಮಾಡುತ್ತಿದ್ದೇವೆ. ಹೀಗಾಗಿ ಮನಸಿನಲ್ಲಿರುವ ಕೊಳಕು ತೆಗೆದು ಒಳಿತಿನ ಊಟ ಉಣಬಡಿಸಿದರೆ ನಾವು ಮತ್ತು ಸಮಾಜ ಉತ್ತಮವಾಗಿರುತ್ತದೆ ಎಂದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸವನ್ನು ಧರ್ಮಗ್ರಂಥಗಳು ಮಾಡುತ್ತವೆ. ಭಗವದ್ಗೀತೆ, ಕುರಾನ್, ಬೈಬಲ್ ಭಾವೈಕ್ಯ ಹಾಗೂ ಮಾನವಿಯತೆ ಸಾರಿವೆ. ಒಳ್ಳೆಯ ತತ್ವ ಸಿದ್ಧಾಂತಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಪ್ರಭಾರ ತಹಸೀಲ್ದಾರ್ ಶೃತಿ, ಒಳ್ಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಕಲ್ಮಠದ ಸಿದ್ಧಲಿಂಗ ಶಿವಾಚಾರ್ಯರು, ವೆಂಕಟಗಿರಿ ಕ್ಯಾಂಪ್ ಸಿದ್ದಾಶ್ರಮದ ಸಿದ್ದರಾಮೇಶ್ವರ ಶರಣರು, ಹಿರಿಯ ಸಾಹಿತಿ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಜಿಪಂ ಮಾಜಿ ಸದಸ್ಯ ಎನ್.ಶಿವನಗೌಡ ಗೊರೇಬಾಳ, ಪ್ರಮುಖರಾದ ರಾಜಶೇಖರ ಪಾಟೀಲ್, ಕೆ.ಮರಿಯಪ್ಪ, ಎಂ.ಕಾಳಿಂಗಪ್ಪ ವಕೀಲ, ಅಭಿಷೇಕ ನಾಡಗೌಡ, ಎಚ್.ಎನ್.ಬಡಿಗೇರ್, ಸರಸ್ವತಿ ಪಾಟೀಲ್, ವಿಜಯಲಕ್ಷ್ಮೀ ಗುರಿಕಾರ, ಖಾಜಿಮಲಿಕ್ ವಕೀಲ, ಹುಸೇನ್ ಸಾಬ್ , ಬಾಬರ್‌ಪಾಷಾ ಜಾಗೀರದಾರ್, ಪಂಪಯ್ಯಸ್ವಾಮಿ ಸಾಲಿಮಠ, ಹುಸೇನ್ ಬಾಷಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net