ಪ್ರಣಾಳಿಕೆಯಲ್ಲಿನ ಭರವಸೆಗಳು ಹುಸಿ-ಬಿಜೆಪಿ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಟೀಕೆ

Basanagouda Badarli KPCC General Secretary
ಬಸನಗೌಡ ಬಾದರ್ಲಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ.
Published on

ಸಿಂಧನೂರು: ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ, ಚುನಾವಣೆ ಸಮಯದಲ್ಲಿ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಆರೋಪಿಸಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬಸವರಾಜ ಬೊಮ್ಮಾಯಿ ದುರ್ಬಲ ಮುಖ್ಯಮಂತ್ರಿಯಾಗಿದ್ದು, ಇದು ಶೇ.40 ಪರ್ಸೆಂಟೇಜ್ ಸರ್ಕಾರವಾಗಿದೆ. 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆಯ ಶೇ.90 ಭರವಸೆಗಳು ಜಾರಿಯಾಗಿಲ್ಲ. ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ತಡೆ ಹಾಗೂ ರೈತರಿಗೆ ನಿರಂತರ ವಿದ್ಯುತ್ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ರೈತರ ಆದಾಯ ದ್ವಿಗುಣಗೊಳಿಸುವ ಯಾವುದೇ ಯೋಜನೆ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕಿನಲ್ಲಿ ಪರ್ಸೆಂಟೇಜ್ ರಾಜಕೀಯದಿಂದ ಅಭಿವೃದ್ಧಿ ಕಾಮಗಾರಿಗಳು ಕಳಪೆಯಾಗಿವೆ. ಶಾಸಕ ವೆಂಕಟರಾವ ನಾಡಗೌಡಗೆ ಸೋಲುವ ಭೀತಿ ಎದುರಾಗಿದೆ. ಜೆಡಿಎಸ್‌ನವರನ್ನೇ ಮತ್ತೆ ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವು ಖಚಿತ ಎಂದರು. ಪ್ರಮುಖರಾದ ಶಿವಕುಮಾರ ಜವಳಿ, ವೆಂಕಟೇಶ ರಾಗಲಪರ್ವಿ, ಎಚ್.ಎನ್.ಬಡಿಗೇರ, ಶರಣಯ್ಯ ಕೋಟೆ, ವೀರರಾಜು, ಸಿದ್ದು ಜೀನೂರು, ವೆಂಕೋಬ, ಮಲ್ಲಯ್ಯ ನಾಯಕ, ಅಮರೇಶ ಗಿರಿಜಾಲಿ, ಶರಣೇಗೌಡ, ಹಂಪಮ್ಮ, ಇಂದುಮತಿ, ಸಾಬಣ್ಣ, ಗಂಗಣ್ಣ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net