

ಸಿಂಧನೂರು: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕುಡಿವ ನೀರಿನ ಕೆರೆಗಳನ್ನು ಮಾ.20 ರೊಳಗಾಗಿ ತುಂಬಿಸಿಕೊಳ್ಳಬೇಕು. ಬೇಜವಾಬ್ದಾರಿ ವಹಿಸಿದರೆ ಪಿಡಿಒ, ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಶಾಸಕ ವೆಂಕಟರಾವ ನಾಡಗೌಡ ಎಚ್ಚರಿಕೆ ನೀಡಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ಬೇಸಿಗೆ ಕುಡಿವ ನೀರಿನ ಸಭೆಯಲ್ಲಿ ಮಾತನಾಡಿದರು. ತಾಲೂಕಿನ 30 ಗ್ರಾಪಂ ವ್ಯಾಪ್ತಿಯಲ್ಲಿ ಸರ್ಕಾರಿ ಕೆರೆಗಳು 141 ಹಾಗೂ ಖಾಸಗಿ 6 ಕೆರೆಗಳು ಕುಡಿವ ನೀರಿಗಾಗಿ ಇದ್ದು ಈಗಾಗಲೇ ಬೇಸಿಗೆ ಆರಂಭವಾಗಿರುವುದರಿಂದ ಅಲ್ಲಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಮಾ. 31ಕ್ಕೆ ತುಂಗಭದ್ರಾ ಎಡದಂಡೆ ನಾಲೆಗೆ ನೀರು ಸ್ಥಗಿತಗೊಳ್ಳುವುದರಿಂದ ಬಹುತೇಕ ಕೆರೆ ತುಂಬಿಸಬೇಕು ಎಂದರು.
ಟೇಲೆಂಡ್ ಭಾಗದ ರಾಗಲಪರ್ವಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕುಡಿವ ನೀರಿನ ಕೆರೆ ತುಂಬಿಸಲು ಮೊದಲ ಆದ್ಯತೆ ನೀಡಲಾಗುವುದು. ನಂತರ ಮೇಲ್ಭಾಗದ ಕೆರೆಗಳನ್ನು ತುಂಬಿಸಬೇಕು. ಸಮಸ್ಯೆ ಇದ್ದಲ್ಲಿ ಪೊಲೀಸರ ಸಹಾಯ ಪಡೆಯಬಹುದು ಎಂದರು.
ಗ್ರಾಪಂ ಪಿಡಿಒಗಳು ಸಭೆಗೆ ಕೆರೆಗಳ ಸಂಖ್ಯೆ, ನೀರು ತುಂಬಿರುವ ಬಗ್ಗೆ ಮಿಸ್‌ಗೈಡ್ ಮಾಡಬಾರದು. ಕುಡಿವ ನೀರಿನ ಸಮಸ್ಯೆ ತಲೆದೋರದಂತೆ ಎಚ್ಚರವಹಿಸುವುದು ಅಗತ್ಯವಾಗಿದೆ. ನೀರು ತುಂಬಿಸಿಕೊಳ್ಳುವಲ್ಲಿ ವಿಳಂಬ ಅನುಸರಿದರೆ ಕಠಿಣ ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ. ನೀರಾವರಿ ಅಧಿಕಾರಿಗಳು ಯಾವ ಕಾಲುವೆಯಿಂದ ನೀರು ತುಂಬಿಸಿಕೊಳ್ಳಬೇಕೆಂಬ ದಿನಾಂಕ ನಿಗದಿ ಮಾಡಿ ಗ್ರಾಪಂ ಪಿಡಿಒಗಳಿಗೆ ತಿಳಿಸಬೇಕು. ಕೆರೆಗಳಿಗೆ ನೀರು ತುಂಬಿಸುವ ಸಂದರ್ಭದಲ್ಲಿ ಅಧಿಕಾರಿಗಳು ಕಾಳಜಿ ವಹಿಸಬೇಕೆಂದು ಸೂಚನೆ ನೀಡಿದರು.
ನೀರಾವರಿ ಅಧಿಕಾರಿಗೆ ತರಾಟೆ: ಕುಡಿವ ನೀರಿನ ಸಭೆಗೆ ಸಮಯಕ್ಕೆ ಸರಿಯಾಗಿ ಬಾರದ ಮಸ್ಕಿ ವಿಭಾಗದ ನೀರಾವರಿ ಇಲಾಖೆ ಅಧಿಕಾರಿ ಸೂಗಪ್ಪರನ್ನು ಕರೆಸುವಂತೆ ನೀರಾವರಿ ಅಧಿಕಾರಿಗೆ ಸೂಚನೆ ನೀಡಿದ ಶಾಸಕ ವೆಂಕಟರಾವ ನಾಡಗೌಡ, ಗಂಭೀರ ಸಭೆ ನಡೆಯುವಾಗ ಇವರಿಗಾಗಿ ನಾವು ಕಾಯಬೇಕು. ಬೆಂಗಳೂರಿನಿಂದ ನಾನು ಬಂದಿರುವೆ, ಮಸ್ಕಿಯಿಂದ ಬರಲು ಇವರಿಗೆ ಎಷ್ಟು ಸಮಯಬೇಕೆಂದು ತರಾಟೆಗೆ ತೆಗೆದುಕೊಂಡರು.