

ಸಿಂಧನೂರು: ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಜೆಸಿಟಿಯು ತಾಲೂಕು ಘಟಕವು ಮಿನಿವಿಧಾನಸೌಧದ ಮುಂದೆ ಸೋಮವಾರ ಪ್ರತಿಭಟನೆ ನಡೆಸಿತು.
ಲಾಕ್‌ಡೌನ್ ತೆರವಿನ ನಂತರ ಕೇಂದ್ರ ಸರ್ಕಾರವು ಕಾರ್ಮಿಕರ ಪರ ಕೆಲಸ ಮಾಡುತ್ತಿಲ್ಲ. ಕಾರ್ಮಿಕರಿಗಾಗಿ ಇರುವ ಕಾನೂನುಗಳನ್ನು ತಿದ್ದುಪಡಿ ಹೆಸರಿನಲ್ಲಿ ಕಾರ್ಪೋರೇಟ್ ಕಂಪನಿಗಳ ಪರವಾಗಿ ರೂಪಿಸಿದೆ. ಕೂಡಲೇ ಕಾರ್ಖಾನೆಗಳ ಕಾಯ್ದೆ, ಕೈಗಾರಿಕಾ ವಿವಾದ ಕಾಯ್ದೆ, ಗುತ್ತಿಗೆ ಕಾರ್ಮಿಕರ ಕಾಯ್ದೆ, ಮಾದರಿ ಸ್ಥಾಯಿ ಆದೇಶಗಳಲ್ಲಿ ನಿಗದಿತ ಅವಧಿ ಕೆಲಸ ಅಳವಡಿಸಲು ತರಲಾಗಿರುವ ಪ್ರಗತಿ ವಿರೋಧಿ ತಿದ್ದುಪಡಿಗಳು ಹಾಗೂ ತುಟ್ಟಿಭತ್ಯೆ ಮುಂದೂಡುವಿಕೆಯ ಆದೇಶಗಳನ್ನು ಹಿಂಪಡೆಯಬೇಕು. ಬಿಸಿಯೂಟ ನೌಕರರ ಗೌರವಧನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಅಂಗನವಾಡಿ ನೌಕರರ ಸಂಘದ ಗೌರವಾಧ್ಯಕ್ಷ ಡಿ.ಎಚ್.ಕಂಬಳಿ, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ, ತಾಲೂಕು ಅಧ್ಯಕ್ಷ ವೆಂಕನಗೌಡ ಗದ್ರಟಗಿ, ಸಿಐಟಿಯು ಕಾರ್ಯದರ್ಶಿ ಶೇಕ್ಷಾಖಾದ್ರಿ, ತಾಲೂಕು ಕಾರ್ಯದರ್ಶಿ ಯಂಕಪ್ಪ, ತಿರುಮಲರಾವ, ನಾಗರಾಜ ಪೂಜಾರ, ಎಸ್.ದೇವೆಂದ್ರಗೌಡ, ಭೀಮರಾಯ, ಪರಶುರಾಮ ತಿಡಿಗೋಳ, ದುರುಗೇಶ ಕಲಮಂಗಿ ಇದ್ದರು.