

ಸಿಂಧನೂರು: ಚಿಕ್ಕ ವಯಸ್ಸಿನಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ. ದುಡಿಮೆ ಹೋಗಿ ಬಾಲ ಕಾರ್ಮಿಕರಾಗಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ರೂಪಾ ಸಿ.ವಗ್ಗಾ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕಾಡಳಿತ ಹಾಗೂ ವಿವಿಧ ಸರ್ಕಾರಿ ಇಲಾಖೆ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಇಂದಿನ ಮಕ್ಕಳೇ ನಾಳಿನ ನಾಡಿನ ಪ್ರಜೆಗಳು. ಅವರು ಉನ್ನತ ಹುದ್ದೆಗೇರುವ ಮೂಲಕ ದೇಶದ ಕೀರ್ತಿ ಪತಾಕೆ ಹಾರಿಸಬೇಕು. ಮಕ್ಕಳ ರಕ್ಷಣೆ ಸಮಾಜದ ಹೊಣೆ ಎಂದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ರಾಮನಗೌಡ ಮಾತನಾಡಿ, ಬಾಲ ಕಾರ್ಮಿಕ ಪದ್ಧತಿ ಅಪರಾಧವಾಗಿದೆ. ಯಾರು ಮಕ್ಕಳನ್ನು ದುಡಿಸಿಕೊಳ್ಳುತ್ತಾರೆ ಅವರಿಗೆ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶವಿದೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕಾದ ವಯಸ್ಸಿನಲ್ಲಿ ದುಡಿಮೆಗೆ ವಾಲುವುದು ಸರಿಯಲ್ಲ. ಸರ್ಕಾರ ಕಡ್ಡಾಯ ಶಿಕ್ಷಣ ಹಕ್ಕು ಜಾರಿಗೆ ತಂದಿದೆ. ಯಾವ ಮಗುವೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು ಎಂದು ತಿಳಿಸಿದರು.
ಸಿಡಿಪಿಒ ಲಿಂಗನಗೌಡ, ಕ್ಷೇತ್ರಶಿಕ್ಷಣಾಧಿಕಾರಿ ಬಸವಲಿಂಗಪ್ಪ, ತಾಲೂಕು ನ್ಯಾಯವಾದಿಗಳ ಸಂಘದ ಖಜಾಂಚಿ ಶರಣಬಸವ ಉಮಲೂಟಿ, ಕಾರ್ಮಿಕ ಇಲಾಖೆಯ ಜೋಕಿನ್ ಇದ್ದರು.