

ಸಿಂಧನೂರು: ತಾಲೂಕಿನ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಜತೆಗೆ ರಸ್ತೆ ನಿರ್ಮಾಣಕ್ಕೂ ಆದ್ಯತೆ ನೀಡಬೇಕು ಎಂದು ಪಿಡಿಒಗಳಿಗೆ ಶಾಸಕ ವೆಂಕಟರಾವ ನಾಡಗೌಡ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಈಗಾಗಲೇ ಬಹುತೇಕ ಗ್ರಾಪಂ ವ್ಯಾಪ್ತಿಗಳಲ್ಲಿ ನರೇಗಾದಡಿ ವಿವಿಧ ಕಾಮಗಾರಿ ಕೈಗೆತ್ತಿಕೊಂಡಿದ್ದು ಯಾವುದೂ ಅಪೂರ್ಣವಾಗಬಾರದು. ಕಳಪೆ ಕೆಲಸ ಮಾಡಿ ಕೈತೊಳೆದುಕೊಳ್ಳುವ ದೂರುಗಳಿವೆ. ಬೇಕಾಬಿಟ್ಟಿ ರಸ್ತೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು ಏಕೆ?. ಈ ಬಗ್ಗೆ ಗಮನ ಏಕಿಲ್ಲ ಎಂದು ತಾಪಂ ಪ್ರಭಾರ ಇಒ ಪವನಕುಮಾರರನ್ನು ತರಾಟೆಗೆ ತೆಗೆದುಕೊಂಡರು.
ಗ್ರಾಪಂಗಳಿಗೆ ಪಿಡಿಒಗಳು ಸರಿಯಾಗಿ ಹೋಗುತ್ತಿಲ್ಲ. ರಸ್ತೆ, ಕುಡಿವ ನೀರು, ಚರಂಡಿ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಜನರು ನೇರವಾಗಿ ನನಗೆ ದೂರವಾಣಿ ಕರೆ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಾರೆ. ಇಂತಹ ಸಮಸ್ಯೆಗಳು ನಮ್ಮಲ್ಲಿಗೆ ಬರುವರೆಗೂ ನೀವೇನು ಮಾಡುತ್ತೀರಿ?. ಕೆಲಸ ಮಾಡುವ ಮನಸಿಲ್ಲದಿದ್ದರೆ ಮನೆಗೆ ಹೋಗಿ ಎಂದು ಎಚ್ಚರಿಸಿದರು.
ಮುಂಗಾರು ಆರಂಭಗೊಂಡಿದ್ದು ಉಪಕಾಲುವೆ ದುರಸ್ತಿ, ಸಮರ್ಪಕವಾಗಿ ನೀರಿನ ಹರಿವು ಆಗುವಂತೆ ನೋಡಿಕೊಳ್ಳಬೇಕು. ಕಾಲುವೆಗೆ ನೀರು ಬರುವುದರೊಳಗೆ ಎಲ್ಲವೂ ಸರಿಯಾಗಬೇಕು. ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ನೀರಾವರಿ ಇಲಾಖೆ ಎಇಇ ಪ್ರಕಾಶಗೆ ಸೂಚಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒ ಇದ್ದರು.