

ಸಿಂಧನೂರು: ಒಂದು ತಿಂಗಳ ಕಾಲ ರಾಜ್ಯಾದ್ಯಂತ ಬಸವ ಸಂಸ್ಕೃತಿ ಅಭಿಯಾನ ಕೈಗೊಂಡು ಬೆಂಗಳೂರಿನಲ್ಲಿ ಸಮಾವೇಶ ನಡೆಸಿದ ಬಸವ ತತ್ವ ಅನುಯಾಯಿಗಳ ಮಠಾಧೀಶರ ಒಕ್ಕೂಟದ ಬಗ್ಗೆ ಅದೃಶ್ಯ ಕಾಡಸಿದ್ಧೇಶ್ವರ ಮಠದ ಶ್ರೀಗಳ ಅವಹೇಳನಕಾರಿ ಹೇಳಿಕೆ ಖಂಡಿಸಿ ಬಸವಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.
ಶಾಂತಿ ಮತ್ತು ತ್ಯಾಗದ ಪ್ರತೀಕವಾದ ಕಾವಿ ಉಡುಪು ಧರಿಸಿರುವ ಸ್ವಾಮೀಜಿ ಅನಾಗರಿಕ ಪದಗಳನ್ನು ಬಳಸಿ ಮಾತನಾಡುವ ಮೂಲಕ ಅಂತರಂಗದಲ್ಲಿರುವ ಮನುಸಿದ್ಧಾಂತವನ್ನು ಅನಾವರಣಗೊಳಿಸಿದ್ದಾರೆ. ಮಠಾಧೀಶರ ಒಕ್ಕೂಟದ ಬಗ್ಗೆ ಮೂದಲಿಸಿದ್ದಾರೆ.‘ಬಸವಣ್ಣ ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಿ ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಭಾವಚಿತ್ರ ಹಾಕಲು ಆದೇಶಿಸಿದ್ದರಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಗೌರವಿಸಲಾಯಿತು. ಆದರೆ, ಇದನ್ನೇ ಕಾಡಸಿದ್ಧೇಶ್ವರ ಸ್ವಾಮೀಜಿ, ಸಿದ್ದರಾಮಯ್ಯ ಕೃಪಾಪೋಷಿತ ಕಲಾವಿದರ ಬಳಗ ಎಂದು ಮೂದಲಿಸಿರುವುದು ಅವರ ಸಣ್ಣತನವನ್ನು ಸಾಬೀತು ಮಾಡಿದಂತಾಗಿದೆ. ಬಸವ ಸಂಸ್ಕೃತಿ ಅಭಿಯಾನದ ಮೂಲಕ ರಾಜ್ಯದ ಜನರಲ್ಲಿ ಮೂಢನಂಬಿಕೆ ತೊಲಗಿಸುವ ಮತ್ತು ನಿಜವಾದ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ವೈದಿಕ ಮನಸ್ಸಿನ ಅವರಲ್ಲಿ ತಳಮಳ ಹುಟ್ಟಿಸಿದೆ. ಹೀಗಾಗಿ ಅಸಹಾಯಕರಾಗಿ ಮನಬಂದಂತೆ ಅಸಂವಿಧಾನಿಕ ಪದಗಳನ್ನು ಬಳಸಿ ಮಾತನಾಡಿದ್ದು, ಖಂಡನೀಯ. ಆದ್ದರಿಂದ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕೆಂದು ಒಕ್ಕೂಟದ ಸದಸ್ಯರು ಆಗ್ರಹಿಸಿದರು.
ಪ್ರಮುಖರಾದ ಚಂದ್ರೇಗೌಡ ಹರೇಟನೂರು, ಬಸನಗೌಡ ಜಿನ್ನಿ, ಶರಣಬಸವ ನೀರಮಾನ್ವಿ, ಪಿ.ಬಸವರಾಜ ಕುರುಕುಂದ, ಗುಂಡಪ್ಪ ಬಳಿಗಾರ, ಚಂದ್ರಶೇಖರ ಗೊರೇಬಾಳ, ಸಂಗಪ್ಪ, ನಿರುಪಾದೆಪ್ಪ ಗುಡಿಹಾಳ, ವೀರನಗೌಡ ಬಸಾಪುರ, ಮಲ್ಲಿಕಾರ್ಜುನ ಹೊಗರನಾಳ, ಅಮರೇಶ ಪಗಡದಿನ್ನಿ, ಚಂದ್ರಪ್ಪ ಚನ್ನಳ್ಳಿ, ಹನುಮನಗೌಡ ಕಾಸರಡ್ಡಿ, ಶರಣಯ್ಯಸ್ವಾಮಿ ಕುರುಕುಂದ, ಶರಣಪ್ಪ ಹಡಪದ ಇದ್ದರು.