

ಸಿಂಧನೂರು; ಸಂಸಾರದಲ್ಲಿ ವಿರಸ ಬರುವುದು ಸಹಜ. ಆದರೆ, ಗುಟ್ಟು ರಟ್ಟು ಮಾಡದೆ ಗಟ್ಟಿತನ ಕಾಪಾಡಿಕೊಂಡಾಗ ಸಂಸಾರ ಸುಖವಾಗಿ ಸಾಗಲು ಸಾಧ್ಯ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ತಾಲೂಕಿನ ತುರ್ವಿಹಾಳದಲ್ಲಿ ಶ್ರೀಗುರು ಅಮೋಘ ಸಿದ್ಧೇಶ್ವರ ಮಠದಿಂದ ಭಾನುವಾರ ಆಯೋಜಿಸಿದ್ದ 74 ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗಂಡ-ಹೆಂಡತಿ ಪರಸ್ಪರ ಅರ್ಥ ಮಾಡಿಕೊಂಡಾಗ ಸಂಸಾರದ ಬಂಡಿ ಸರಿಯಾಗಿ ಸಾಗುತ್ತದೆ. ಇಬ್ಬರ ನಡುವೆ ವಿಶಾಲ ಮನೋಭಾವ ಬೆಳೆಯಬೇಕು. ಇಬ್ಬರು ಸಮಾನರೆಂಬ ಗುಣ ಹೊಂದಬೇಕು. ಸುಂದರ ಬದುಕು ಕಟ್ಟಿಕೊಳ್ಳಲು ವಿವಾಹ ಮಾಡಿಕೊಳ್ಳಬೇಕು. ಇದು ಎರಡು ಹೃದಯಗಳ ಸಮ್ಮಿಲನಕ್ಕೆ ಕಾರಣವಾಗುತ್ತದೆ. ಸುಖ-ದುಃಖವನ್ನು ಸಮನಾಗಿ ಸ್ವೀಕರಿಸಿದರೆ ಜೀವನವನ್ನು ಗೆಲ್ಲುತ್ತೇವೆ ಎಂದ ಅವರು, ಇಲ್ಲಿನ ಮಾದಯ್ಯ ಗುರುವಿನ್ ಅವರ ವಯಸ್ಸು ಚಿಕ್ಕದಾದರೂ ಕೀರ್ತಿ ದೊಡ್ಡದು. ಶ್ರೀಮಠವು ಸಮಾಜಕ್ಕೆ ವಿಶೇಷ ಕೊಡುಗೆ ನೀಡಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಪುತ್ರ ಹಾಗೂ ಅವರ ಸಹೋದರನ ಪುತ್ರ ನವ ಜೀವನಕ್ಕೆ ಕಾಲಿಟ್ಟರು.
ಸಿದ್ಧಲಿಂಗ ಸ್ವಾಮೀಜಿ, ಪುರವರಮಠದ ಅಮರ ಗುಂಡಯ್ಯಸ್ವಾಮೀಜಿ, ಶ್ರೀಮಠದ ಮಾದಯ್ಯ ಗುರುವಿನ್, ಸರ್ವೇಶ್ವರ ಮಠದ ಗುಂಡಯ್ಯ ಅಪ್ಪಾಜಿ, ಗಬ್ಬೂರಿನ ಬೂದಿ ಬಸವೇಶ್ವರ ಸ್ವಾಮೀಜಿ, ಗುರುಸಿದ್ದಯ್ಯಸ್ವಾಮಿ, ಸಚಿವರಾದ ಬೈರತಿ ಸುರೇಶ, ಶಿವರಾಜ ತಂಗಡಗಿ, ಎನ್.ಎಸ್.ಬೋಸರಾಜು, ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಆರ್.ಬಸನಗೌಡ ತುರ್ವಿಹಾಳ, ಬಸನಗೌಡ ದದ್ದಲ್, ಹಂಪಯ್ಯ ನಾಯಕ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಎಂಎಲ್‌ಸಿಗಳಾದ ಶರಣೇಗೌಡ ಬಯ್ಯಪುರ, ಎ.ವಸಂತಕುಮಾರ, ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ಮಾಜಿ ಶಾಸಕರಾದ ಅಮರೇಗೌಡ ಬಯ್ಯಪುರ, ಕೆ.ಶಿವನಗೌಡ ನಾಯಕ, ಜಿಲ್ಲಾಧಿಕಾರಿ ಕೆ.ನಿತೀಶ, ಎಸ್ಪಿ ಪುಟ್ಟಮಾದಯ್ಯ, ಎಸಿ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಅರುಣ್ ದೇಸಾಯಿ, ಪೌರಾಯುಕ್ತ ಮಂಜುನಾಥ ಗುಂಡೂರು, ಎಂ.ದೊಡ್ಡಬಸವರಾಜ, ತಾಪಂ ಇಒ ಚಂದ್ರಶೇಖರ ಇತರರಿದ್ದರು.