ಸಿಂಧನೂರಿನಲ್ಲಿ ತೊಗರಿ ಫಸಲು ಬಂಪರ್; ಲಾಭದ ನಿರೀಕ್ಷೆಯಲ್ಲಿ ರೈತರು

Sindhanour togari crop
ಗುಡದೂರು ಹೋಬಳಿ ವ್ಯಾಪ್ತಿಯಲ್ಲಿ ತೊಗರಿ ಬೆಳೆ ಸಮೃದ್ಧವಾಗಿ ಬೆಳೆದಿರುವುದು.
Published on

ಸಿಂಧನೂರು: ತಾಲೂಕು ವ್ಯಾಪ್ತಿಯ ಮಳೆಯಾಶ್ರಿತ ಗ್ರಾಮಗಳ ರೈತರ ಜಮೀನುಗಳಲ್ಲಿ ಈ ಬಾರಿ ತೊಗರಿ ಬೆಳೆ ಕಣ್ಣು ಕುಕ್ಕುತ್ತಿದ್ದು, ಬಂಪರ್ ಬೆಳೆಯ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಬಿತ್ತನೆ ಸಂದರ್ಭ ಹಾಗೂ ಕಳೆದ ತಿಂಗಳು ಮಳೆ ಕೊರತೆ ಎದುರಾಗಿತ್ತು. ತದನಂತರ ಬಿಟ್ಟೂ ಬಿಡದೇ ಸುರಿದ ಪರಿಣಾಮ ಎದೆಯೆತ್ತರಕ್ಕೆ ಬೆಳೆದಿದ್ದು, ರೈತರಲ್ಲಿ ಇಳುವರಿಯ ನಿರೀಕ್ಷೆಗಳು ಗರಿಗೆದರಿವೆ. ಕಳೆದ ಬಾರಿ ಕ್ವಿಂಟಲ್‌ಗೆ ಆರಂಭದಲ್ಲಿ 12 ಸಾವಿರದವರೆಗೂ ತೊಗರಿ ಮಾರಾಟವಾಗಿತ್ತು. ತದನಂತರ 7,500ರಿಂದ 8000 ಸಾವಿರದವರೆಗೂ ದರ ಇತ್ತು. ಪುನಃ 12 ಸಾವಿರಕ್ಕೆ ತಲುಪಿತ್ತು. ಉತ್ತಮ ದರವಿದ್ದ ಕಾರಣ ಮಳೆಯಾಶ್ರಿತ ರೈತರು ಒಳ್ಳೆಯ ಆದಾಯ ಪಡೆದುಕೊಂಡಿದ್ದರು. ಈ ಬಾರಿಯೂ ತೊಗರಿ ಬೆಳೆ ಉತ್ತಮವಾಗಿ ಇಳುವರಿ ಬಂದಿದ್ದು ಕೃಷಿಕರು ಖುಷಿಯಲ್ಲಿದ್ದಾರೆ.

ಕಳೆದ ಬಾರಿಯಂತೆ ಈ ಸಲ ಕೀಟಗಳ ಕಾಟ ಕಡಿಮೆ ಇದೆ ಎಂದು ರೈತರು ಹೇಳುತ್ತಿದ್ದಾರೆ. ಸತತ ಮಳೆಯಿಂದಾಗಿ ಅಷ್ಟೊಂದು ಪ್ರಮಾಣದಲ್ಲಿ ತೊಗರಿಗೆ ಹುಳಬಾಧೆ ಕಾಡಿಲ್ಲ. ಇನ್ನು ಒಡಲು ಪ್ರದೇಶದಲ್ಲಿ ನೀರು ನಿಂತು ಅಲ್ಲಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಉಳಿದಂತೆ ಬೆಳೆ ಕಣ್ಣು ಬಿಡುವಂತೆ ಇದೆ. ಹೊಲಗಳಲ್ಲಿ ತೊಗರಿ ಬೆಳೆ ನೋಡುವುದೇ ಒಂದು ಖುಷಿ ಎನ್ನುವ ವಾತಾವರಣ ನಿರ್ಮಾಣಗೊಂಡಿದೆ.

ಮಳೆಯಾಶ್ರಿತ ಹಾಗೂ ಟೇಲೆಂಡ್ ಭಾಗದಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಉತ್ತಮ ಮಳೆಯಿಂದ ಸಮೃದ್ಧಿ ಪಡೆದುಕೊಂಡಿವೆ. ಕಳೆದ ವರ್ಷ ಮಳೆ ಅಭಾವ ಎದುರಾಗಿತ್ತು. ಈಗ ಆ ಸಮಸ್ಯೆ ಇಲ್ಲ. ತೇವಾಂಶ ಉತ್ತಮವಾಗಿದೆ. ಕೀಟಬಾಧೆ ಉಂಟಾಗದಿದ್ದರೆ ಉತ್ತಮ ಬೆಳೆ ರೈತರ ಕೈ ಸೇರಲಿದೆ.
ನಜೀರ್ ಅಹ್ಮದ್ ಸಹಾಯಕ ಕೃಷಿ ನಿರ್ದೇಶಕ ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net