

ಸಿಂಧನೂರು: ಪರಿಸರ ಮತ್ತು ಧರ್ಮ ಮಾನವನ ಉಸಿರು ಇದ್ದಂತೆ. ಪರಿಸರದಿಂದ ಆಮ್ಲಜನಕ ದೊರೆತರೆ, ಧರ್ಮದಿಂದ ಉತ್ತಮ ಮಾರ್ಗದರ್ಶನ ಸಿಗಲಿದೆ ಎಂದು ತಿಂಥಣಿ ಬ್ರಿಡ್ಜ್‌ನ ಕನಕ ಗುರುಪೀಠಾಧ್ಯಕ್ಷ ಸಿದ್ಧರಾಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಸುಕಾಲಪೇಟೆ ನಂಜುಂಡಯ್ಯ ಗುರುವಿನ ಮಠದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಧರ್ಮ-ಪರಿಸರ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮನುಷ್ಯನ ಆಸೆ, ಆಕಾಂಕ್ಷೆಗಳು ಹೆಚ್ಚಿದ್ದರಿಂದ ಗಂಡಾಂತರ ಬಂದಿದೆ. ವಸತಿ, ಕಾರ್ಖಾನೆ ನಿರ್ಮಾಣ, ಇತರ ಉದ್ದೇಶಕ್ಕಾಗಿ ಮರಗಳನ್ನು ನಾಶಪಡಿಸಲಾಗುತ್ತಿದೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತದೆ. ಪರಿಸರ ಸ್ನೇಹಿ ಜೀವನ ಎಲ್ಲರೂ ಹೊಂದಬೇಕು. ಎಲ್ಲ ಸೃಷ್ಟಿಯು ದೇವರ ಪ್ರೀತಿಯ ಕ್ರಿಯೆಯಾಗಿದೆ ಮತ್ತು ಮಾನವಕುಲವು ಜೈವಿಕ ವೈವಿಧ್ಯತೆಯನ್ನು ನಾಶ ಮಾಡಲು ಸಾಧ್ಯವಿಲ್ಲ. ಮಾನವೀಯತೆ, ಬದುಕು ಕಟ್ಟಿಕೊಳ್ಳುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಅದು ನಮ್ಮನ್ನು ರಕ್ಷಣೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಜನರಲ್ಲಿ ಅರಿವು ಮೂಡಿಸುವ ಸಂಬಂಧ ಗಿಡಗಳನ್ನು ವಿತರಿಸಲಾಗುತ್ತಿದೆ ಎಂದರು.
ಇದನ್ನೂ ಓದಿ: 42 ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ
ತುರ್ವಿಹಾಳ ಅಮೋಘ ಸಿದ್ಧೇಶ್ವರ ಮಠದ ಮಾದಯ್ಯ ಗುರುವಿನ್ ಮಾತನಾಡಿ, ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ಜಾಗೃತಿ ಕಾರ್ಯಕ್ರಮ ಅತ್ಯುತ್ತಮದ್ದಾಗಿದೆ. ಇಂದು ಧರ್ಮ, ಪರಿಸರ ಉಳಿಯಬೇಕಿದೆ. ನಾವೆಲ್ಲ ಪರಿಸರ ರಕ್ಷಣೆಗಾಗಿ ಗಿಡಗಳನ್ನು ನೆಟ್ಟು ಬೆಳೆಸಬೇಕು. ಧರ್ಮ ರಕ್ಷಣೆಗಾಗಿ ಸಂಸ್ಕೃತಿ ಉಳಿಸಬೇಕೆಂದು ತಿಳಿಸಿದರು.
ಜಿಪಂ ಮಾಜಿ ಸದಸ್ಯ ಕೆ.ಕರಿಯಪ್ಪ ಉದ್ಘಾಟಿಸಿ ಮಾತನಾಡಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಅದರ ಜತೆಗೆ ಧರ್ಮವನ್ನು ರಕ್ಷಿಸುವ ಕಾರ್ಯವೂ ನಡೆಯಬೇಕೆಂದು ತಿಳಿಸಿದರು. ಪ್ರಮುಖರಾದ ಚಿದಾನಂದಯ್ಯ ಗುರುವಿನ್, ನಂಜುಂಡಯ್ಯ ಗುರುವಿನ್, ಬೀರದೇವರು, ಬೀರಪ್ಪ ಪೂಜಾರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಕೆ.ಭೀಮಣ್ಣ ವಕೀಲ, ಪ್ರಮುಖರಾದ ಅಮರೇಶಪ್ಪ ಮೈಲಾರ, ಕೆ.ಗ್ಯಾನಪ್ಪ, ಬೀರಪ್ಪ ಶಂಭೋಜಿ, ಸುರೇಶ ಹಚ್ಚೊಳ್ಳಿ, ನಾಗರಾಜ ಬಾದರ್ಲಿ, ಶಿವು ಟಿ., ಆಂಜನೇಯ ಎಸ್. ಇತರರಿದ್ದರು.