ಹಾಲುಮತ ಸಂಸ್ಕೃತಿ ವೈಭವ 12ರಿಂದ

Published on

ಸಿಂಧನೂರು: ಪ್ರತಿ ವರ್ಷದಂತೆ ಈ ಬಾರಿಯೂ ಜ.12, 13 ಮತ್ತು 14ರಂದು ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ವೈಭವ ತಿಂಥಣಿ ಬ್ರಿಜ್‌ನ ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರುಪೀಠದಲ್ಲಿ ನಡೆಯಲಿದೆ ಎಂದು ಕನಕ ಗುರುಪೀಠದ ತಾಲೂಕು ಘಟಕದ ಅಧ್ಯಕ್ಷ ಅಮರೇಶಪ್ಪ ಮೈಲಾರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಜ.12ರಂದು ಪವಿತ್ರ ಪ್ರಾಣಿ ಕುರಿ, ಪಂಚರತ್ನಗಳಾದ ಕಂಬಳಿ, ಭಂಡಾರ, ಡೊಳ್ಳು, ಪಲ್ಲಕ್ಕಿ, ಬೆತ್ತ ಪೂಜೆ ಮತ್ತು ಹಾಲುಮತ ಧರ್ಮದ ಧ್ವಜಾರೋಹಣದೊಂದಿಗೆ ಹಾಲುಮತ ಸಂಸ್ಕೃತಿ ವೈಭವ ಆರಂಭವಾಗಲಿದೆ. ಕೃಷ್ಣಾ ನದಿಯಲ್ಲಿ ಗಂಗೆ ಪೂಜೆ, ಕುಂಭ-ಕಳಸ, ಡೊಳ್ಳು ವಾದ್ಯಗಳೊಂದಿಗೆ ಬೀರದೇವರ ಪಲ್ಲಕ್ಕಿ ಮೆರವಣಿಗೆ, ಶಿವಸಿದ್ದಯೋಗ ವಿದ್ಯಾಮಂದಿರ ಶಿಲಾನ್ಯಾಸ ಮತ್ತು ಪೂಜಾರಿಗಳ ಸಮಾವೇಶ, ಟಗರುಗಳ ಕಾಳಗ ನಡೆಯಲಿದ್ದು, ಪ್ರಥಮ ಬಹುಮಾನ ರೂ.25ಸಾವಿರ, ದ್ವಿತೀಯ ಬಹುಮಾನ 15 ಸಾವಿರ ರೂ., ತೃತೀಯ ಬಹುಮಾನ 10 ಸಾವಿರ ರೂ.ನೀಡಲಾಗುವುದು. ‘ನಾ ಸತ್ತಿಲ್ಲ’ ಹಾಸ್ಯಭರಿತ ಸಾಮಾಜಿಕ ನಾಟಕ ಪ್ರದರ್ಶನವಾಗಲಿದೆ.

ಜ.13 ರಂದು ಹಾಲುಮತ ಭಾಸ್ಕರ, ಕನಕರತ್ನ, ಸಿದ್ದಶ್ರೀ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ನಡೆಯಲಿದ್ದು, ರಾಜ್ಯಪಾಲ ಸಿ.ಎಚ್.ವಿಜಯಶಂಕರ ಆಗಮಿಸಲಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸವನ್ನು ಸಾರುವ ಐತಿಹಾಸಿಕ ಮರಣ ಶಾಸನ ನಾಟಕ ಪ್ರದರ್ಶನವಾಗಲಿದೆ. ಜ.14ರಂದು ಸಿದ್ದರಾಮೇಶ್ವರ ಜಯಂತಿ ಪ್ರಯುಕ್ತ ಸರ್ವ ಸಿದ್ದರ ಸ್ಮರಣೋತ್ಸವ ಹಮ್ಮಿಕೊಳ್ಳಲಾಗಿದೆ. ಸಂಜೆ ಎತ್ತುಗಳಿಂದ ಭಾರ ಎಳೆಯುವ ಸ್ಪರ್ಧೆ ನಡೆಯಲಿದ್ದು, ಪ್ರಥಮ ಬಹುಮಾನ 35 ಸಾವಿರ ರೂ., ದ್ವಿತೀಯ ಬಹುಮಾನ 21 ಸಾವಿರ ರೂ., ತೃತೀಯ ಬಹುಮಾನ 11 ಸಾವಿರ ರೂ. ನೀಡಲಾಗುವುದು.

ಕುರುಬ ಸಮುದಾಯದ ಸಂಸ್ಕೃತಿ, ಸಾಮಾಜಿಕ, ರಾಜಕೀಯ ಇತಿಹಾಸ ಕುರಿತು ರಾಜ್ಯದ ಹಲವು ವಿದ್ವಾಂಸರಿಂದ ಮೂರು ದಿನಗಳ ಕಾಲ ಹಾಲುಮತ ಸಂಸ್ಕೃತಿ ಕಮ್ಮಟ ನಡೆಯಲಿದೆ. ಸಂಧಿವಾತ, ಹಲ್ಲುನೋವು, ಮೂಲವ್ಯಾಧಿ, ಕಣ್ಣಿನ ತೊಂದರೆ, ತಲೆ ನೋವು, ಚರ್ಮರೋಗ, ಹುಣ್ಣುಗಳ್ಳಿಗೆ ಪಾರಂಪರಿಕ ಸಿದ್ದ ವೈದ್ಯರಿಂದ ಉಚಿತ ಆರೋಗ್ಯ ಸ್ಪಂದನಾ ಶಿಬಿರ ನಡೆಯಲಿದೆ ಎಂದರು.

ಮುಖ್ಯಮಂತ್ರಿ ಉದ್ಘಾಟನೆ

ದೇವದುರ್ಗ: ತಾಲೂಕಿನ ತಿಂಥಣಿ ಬ್ರಿಡ್ಜ್ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಜ.12, 13, 14ರಂದು ಹಾಲುಮತ ಸಂಸ್ಕೃತಿ ವೈಭವ ಹಮ್ಮಿಕೊಂಡಿದ್ದು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಗೋವಿಂದರಾಯ ಹೇಳಿದರು.

ಸುದ್ದಿ ಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಜ.12ರಂದು ಪೂಜಾರಿಗಳ ಸಮಾವೇಶ, ಶಿವಸಿದ್ಧ ಯೋಗ ವಿದ್ಯಾಮಂದಿರ ಶಿಲಾನ್ಯಾಸ ಜರುಗುವುದು. ಪರಮಪೂಜ್ಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯವಹಿಸುವರು.

ಸಚಿವರಾದ ಎಸ್.ಭೈರತಿ ಸುರೇಶ, ಸತೀಶ ಜಾರಕಿಹೊಳಿ, ಡಾ.ಶರಣು ಪ್ರಕಾಶ ಪಾಟೀಲ್, ಎನ್.ಎಸ್.ಬೋಸರಾಜು, ಸಚಿವ ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶರಣಬಸಪ್ಪ ದರ್ಶನಾಪುರ ಭಾಗವಹಿಸುವರು. ಜ.13ರಂದು ಹಾಲುಮತ ಭಾಸ್ಕರ, ಕನಕ ರತ್ನ, ಸಿದ್ದ ಶ್ರೀ ಪ್ರಶಸ್ತಿ ಪ್ರದಾನ ಮತ್ತು ಸನ್ಮಾನ ಸಮಾರಂಭ ಜರುಗುಲಿದೆ ಎಂದರು.

ಹಾಲುಮತ ಸಮಾಜದ ತಾಲೂಕು ಅಧ್ಯಕ್ಷ ನಾಗರಾಜ ಖಾನಾಪುರ, ಪ್ರಮುಖರಾದ ಮಲ್ಲಪ್ಪ ಕೊಪ್ಪರ, ಲಿಂಗಪ್ಪ, ಮಲ್ಲಿಕಾರ್ಜುನ ಜಂಬಲದಿನ್ನಿ, ನರಸಣ್ಣ ನೀಲವಂಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net