

ಸಿಂಧನೂರು: ನಗರದ ಹಳ್ಳದ ಸೇತುವೆ ದುರಸ್ತಿ ಕೈಗೊಳ್ಳಲು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಶುಕ್ರವಾರ ತಹಸಿಲ್ ಕಚೇರಿ ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಪತ್ರ ಸಲ್ಲಿಸಿತು.
ಸೇತುವೆ ಎಲ್‌ಐಸಿ ಆಫೀಸ್ ಮುಂದಿನಿಂದ ಯಲ್ಲಮ್ಮ ದೇವಸ್ಥಾನದವರೆಗೆ ಕೆಳಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. 150 ಎ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಳ್ಳದ ಸೇತುವೆ ಇದ್ದು, ದಿನವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅಲ್ಲದೇ ಬೃಹತ್ ಲಾರಿಗಳು, ಸರಕು-ಸಾಗಣೆ ವಾಹನಗಳು ಸೇತುವೆಯನ್ನು ಹಾದುಹೋಗುವುದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸೇತುವೆಯ ಕೆಳಭಾಗದಲ್ಲಿ 500 ಮೀಟರ್ ನಷ್ಟು ಜಾಯಿಂಟ್ ಬಿಟ್ಟಿರುವುದರಿಂದ ಭಾರದ ವಾಹನಗಳು ಸಂಚರಿಸಿದಾಗ ದಿನದಿಂದ ದಿನಕ್ಕೆ ಸೇತುವೆಗೆ ಧಕ್ಕೆಯಾಗುವ ಮುನ್ಸೂಚನೆಗಳಿದ್ದು, ಈ ಕೂಡಲೇ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ 17 ಕೋಟಿ ರೂ. ಹಣದಲ್ಲಿ ಗುಣಮಟ್ಟದ ಸೇತುವೆ ನಿರ್ಮಾಣ ಮಾಡಬೇಕಾಗಿತ್ತು. ಆದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಶಾಮೀಲಾಗಿ ಕಳಪೆ ಕಾಮಗಾರಿಗೆ ಮಾಡಿದ್ದಾರೆ ಎಂದು ಆರೋಪಿಸಿ, ಈಗಾಗಲೇ ಬಿರುಕುಬಿಟ್ಟ ಮೌಖಿಕವಾಗಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೇ ಸೇತುವೆಯ ಮೇಲಿನ ತಗ್ಗು -ದಿನ್ನೆ ಹಾಗೂ ಧೂಳಿನಿಂದ ದಿನವೂ ವಾಹನ ಸವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರವೇ ಜಿಲ್ಲಾಧ್ಯಕ್ಷ ಗಂಗಣ್ಣ ಡಿಶ್, ಉಪಾಧ್ಯಕ್ಷ ಎಸ್.ದೇವೇಂದ್ರಗೌಡ, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಭಜಂತ್ರಿ, ತಾಲೂಕು ಅಧ್ಯಕ್ಷ ಲಕ್ಷ್ಮಣ ಭೋವಿ, ಮುಖಂಡರಾದ ರಫೀ ಕುನ್ನಟಗಿ, ಶ್ರೀಧರಾಚಾರ್ಯ, ಎಸ್.ಎಸ್.ಪಾಷಾ, ಗುರುರಾಜ ಮುಕ್ಕುಂದಾ, ಬಸವರಾಜ ಗಸ್ತಿ, ಡಾ.ಸೋಮನಾಥ ಸೂಲಂಗಿ, ಕಾಳಪ್ಪ ಮೇಸ್ತ್ರೀ, ಲಿಂಗಪ್ಪ ಜಂಗಮರಹಟ್ಟಿ, ಬಾಷಾಸಾಬ್, ಬಸವರಾಜ ಟೇಲರ್, ರಾಜಾಸಾಬ್ ಗಂಗಾನಗರ, ಶಂಕ್ರಪ್ಪ ವಿರುಪಾಪುರ, ಶರಣಬಸವ ಮಲ್ಲಾಪುರ, ಆರ್.ಎಕ್ಸ್. ಸೂರಿ, ರಂಜಾನಸಾಬ, ಮಹಿಬೂಬ ಕುನ್ನಟಗಿ, ಅಜ್ಮೀರ ಸಾಬ್ ನಾಗಲಾಪುರ, ರವಿ ಬಸಾಪುರ ಇದ್ದರು.