

ಸಿಂಧನೂರು: ತಾಲೂಕಿನಲ್ಲಿ ದಲಿತರ ಭೂ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ದಸಂಸ ತಾಲೂಕು ಘಟಕ ಬುಧವಾರ ತಹಸಿಲ್ ಕಚೇರಿ ಮುಂದೆ ಧರಣಿ ನಡೆಸಿತು.
ಗುಂಜಳ್ಳಿ ಹೋಬಳಿಯ ವಿರುಪಾಪುರ ಗ್ರಾಮದ ಸರ್ವೇ ನಂ. 118 ರಲ್ಲಿ 10 ಎಕರೆ ಜಮೀನನ್ನು ಸಿಂಧನೂರು ಭೂ ನ್ಯಾಯ ಮಂಡಳಿಯು ಎಸ್ಸಿ-ಎಸ್ಟಿ, ಹಿಂದುಳಿದ ಜನರಿಗೆ ಭೂಮಿ ಹಂಚಿಕೆ ಮಾಡಿದೆ. ಆದರೆ, ಫಲಾನುಭವಿಗಳಿಗೆ ಪಟ್ಟಾ ನೀಡಿಲ್ಲ.ಕೂಡಲೇ ಭೂ ದಾಖಲೆಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಹತ್ತಿಗುಡ್ಡ ಸರ್ವೇ ನಂ. 51/ಬ ಕ್ಷೇತ್ರ 4 ಎಕರೆ 14 ಗುಂಟೆ ಜಮೀನು ಭೂ ನ್ಯಾಯ ಮಂಡಳಿ ಆದೇಶದಂತೆ ದುರುಗಪ್ಪ ಬಸಪ್ಪ ಹರಿಜನಗೆ ಮಂಜೂರಾಗಿದ್ದು, ಪಹಣಿಯಲ್ಲಿ ಹೆಸರು ದಾಖಲಿಸಿ, ವ್ಯವಸಾಯಕ್ಕೆ ಅಡ್ಡಿ ಪಡಿಸುತ್ತಿರುವ ಸವರ್ಣೀಯರಾದ ಅಮರೇಶಪ್ಪ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ದಢೇಸುಗೂರು ಗ್ರಾಮದ ಸರ್ವೇ ನಂ. 81 ರಲ್ಲಿ ಐದು ಜನ, 84ರಲ್ಲಿ ಎಂಟು ಜನ ವಿಮುಕ್ತ ದೇವದಾಸಿಯರಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಜಮೀನು ಮಂಜೂರಾಗಿದೆ. ಜಮೀನನ್ನು ಮಾಜಿ ಶಾಸಕ ಬಸವರಾಜ ದಢೇಸುಗೂರು ಅವರು ಖೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮ ಖರೀದಿ ಪತ್ರ ಮಾಡಿಕೊಂಡಿದ್ದಾರೆ. ಈ ಅಕ್ರಮವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ ಮಹಿಳೆಯರಿಗೆ ಭೂಮಿ ಮರಳಿಸಬೇಕೆಂದು ಆಗ್ರಹಿಸಿದರು.