

ಸಿಂಧನೂರು : ಮುಂದಿನ ಪೀಳಿಗೆಗೆ ತುಂಗಭದ್ರಾ ಉಳಿಸಿ, ರಾಜ್ಯದ ಭ್ರಷ್ಟ ಸರ್ಕಾರವನ್ನು ತೊಲಗಿಸಿ ಎನ್ನುವ ಒತ್ತಾಯದೊಂದಿಗೆ ಬಿಜೆಪಿ ಗ್ರಾಮೀಣ ಮತ್ತು ನಗರ ಘಟಕದ ಪದಾಧಿಕಾರಿಗಳು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಚಂದ್ರಶೇಖರಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಕಳೆದ 23 ತಿಂಗಳಿನಿಂದ ಕಾಂಗ್ರೆಸ್ ಸರ್ಕಾರ ಒಂದಿಲ್ಲೊಂದು ಹಗರಣ, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಜನ ವಿರೋಧಿ ನೀತಿ ಹಾಗೂ ರೈತರು, ವಿದ್ಯಾರ್ಥಿಗಳ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ. ರೈತಪರ ಸರ್ಕಾರ ಎಂದು ಹೇಳುವ ಕಾಂಗ್ರೆಸ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯದ ನೀರನ್ನು ರೈತರಿಗೆ ಸಮರ್ಪಕವಾಗಿ ಒದಗಿಸದೆ, 200ಕ್ಕೂ ಹೆಚ್ಚು ಕಾರ್ಖಾನೆಗಳಿಗೆ ಪೂರೈಸುತ್ತಿದೆ. ತಜ್ಞ ಕನ್ನಯ್ಯ ನಾಯ್ಡು ಅವರು ನೀಡಿದ ಸಲಹೆಯಂತೆ ರಾಜ್ಯ ಸರ್ಕಾರ ಟಿಬಿ ಡ್ಯಾಮ್ ಕ್ರಸ್ಟ್‌ಗೇಟ್‌ಗಳನ್ನು ಬದಲಿಸಬೇಕು. ಈ ಭಾಗದ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಸರ್ಕಾರದ ಒತ್ತಡ ಹೇರಿ ಮಳೆಗಾಲ ಆರಂಭಕ್ಕೂ ಮುನ್ನ ಹೊಸ ಕ್ರಸ್ಟ್‌ಗೇಟ್‌ಗಳನ್ನು ಅಳವಡಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹಿಂಗಾರು ಹಂಗಾಮಿನಲ್ಲಿ ಬೆಳೆದ ಜೋಳ ಖರೀದಿ ವಿಳಂಬದಿಂದ ರೈತರಿಗೆ ತೀವ್ರ ತೊಂದರೆ ಆಗುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ತ್ವರಿತವಾಗಿ ನೋಂದಣಿ ಮಾಡಿಕೊಂಡು ಖರೀದಿಸಬೇಕು. ಸಿಂಧನೂರು ನಗರದಲ್ಲಿ ರಸ್ತೆ ವಿಸ್ತರಣೆಯಿಂದಾಗಿ ಬೀದಿಬದಿ ವ್ಯಾಪಾರಸ್ಥರ ಬದುಕು ಬೀದಿಗೆ ಬಂದಿದೆ. ಅವರಿಗೆ ಶಾಶ್ವತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ವಿತರಣಾ ಕಾಲುವೆಗಳ ದುರಸ್ತಿ ಮಾಡಿಸಿ ಕೆಳಭಾಗದ ರೈತರಿಗೆ ಸಮರ್ಪಕ ನೀರು ಹರಿಸುವಂತೆ ಮಾಡಬೇಕು. ಈ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ವೆಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜೀನೂರು, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಕೆ.ಕರಿಯಪ್ಪ, ಮಧ್ವರಾಜ ಆಚಾರ್ಯ, ಪರಮೇಶ್ವರಪ್ಪ ಹಾದಿಮನಿ, ಶರಣೇಗೌಡ ಹೊಸಳ್ಳಿ, ಹಂಸರಾಜ ಮಾಡಸಿರವಾರ, ಲಿಂಗರಾಜ ಹೂಗಾರ, ವೆಂಕನಗೌಡ ಮಲ್ಕಾಪುರ, ನದಾಫ್, ಕೆ.ಹನುಮೇಶ, ವಿಶ್ವನಾಥ ಚೌಧರಿ ಇತರರಿದ್ದರು.