

ಸಿಂಧನೂರು: ಮೂರು ತಿಂಗಳು ಕಳೆದರೂ ಬೀದಿ ಬದಿ ವ್ಯಾಪಾರಸ್ಥರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲವೆಂದು ಬೀದಿ ಬದಿ ವ್ಯಾಪಾರಸ್ಥರು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.
ಸಿಂಧನೂರು ನಗರದ ರಾಯಚೂರು, ಕುಷ್ಟಗಿ ಹಾಗೂ ಗಂಗಾವತಿ ರಸ್ತೆ ಹಾಗೂ ಸರ್ಕಾರಿ ಜಾಗಗಳಲ್ಲಿ ಹಲವು ವರ್ಷಗಳಿಂದ ಇಟ್ಟುಕೊಂಡಿದ್ದ ಸಣ್ಣಪುಟ್ಟ ಅಂಗಡಿಗಳನ್ನು ಫೆ. 4 ರಂದು ಏಕಾಏಕಿ ತೆರವುಗೊಳಿಸಿದ್ದರಿಂದ ಕುಟುಂಬಗಳು ಕಂಗಾಲಾಗಿವೆ. ನಗರದಲ್ಲಿ ಸಾಮಾಜಿಕ, ಆರ್ಥಿಕ ಬಿಕ್ಕಟ್ಟು ಬೀದಿ ಬದಿ ವ್ಯಾಪಾರಸ್ಥರೆಲ್ಲರ ಕುಟುಂಬಗಳ ಮೇಲೆ ಪರೋಕ್ಷವಾಗಿ ತುರ್ತು ಪರಿಸ್ಥಿತಿ ಹೇರಿದಂತಾಗಿದೆ. ಸಣ್ಣ ವ್ಯಾಪಾರದಿಂದ ಬಂದ ಅಲ್ಪ ಆದಾಯದಿಂದ ಉಪಜೀವನ ನಡೆಸುತ್ತಿರುವ ಕುಟುಂಬಗಳು ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿವೆ ಎಂದು ಅಳಲು ತೋಡಿಕೊಂಡರು.
ನಗರದ ಪ್ರಮುಖ ರಸ್ತೆ ಬದಿಗಳಲ್ಲಿನ ವ್ಯಾಪಾರಿಗಳು ಮುನಿಸಿಪಲ್, ಪಿಡಬ್ಲ್ಯುಡಿ, ಹೆದ್ದಾರಿ ಪ್ರಾಧಿಕಾರ ಹಾಗೂ ಪೊಲೀಸ್ ಅಧಿಕಾರಿಗಳಿಂದ ಕಿರುಕುಳದ ನಡುವೆಯೂ ಬಡವರಿಗೆ, ಮಧ್ಯಮ ವರ್ಗದವರಿಗೆ ಉತ್ತಮ ಸರಕು-ಸೇವೆಗಳನ್ನು ಒದಗಿಸುತ್ತ ಬಂದಿದ್ದರೂ, ಜಿಲ್ಲಾ, ತಾಲೂಕು ಆಡಳಿತ ಹಾಗೂ ನಗರಸಭೆಯಿಂದ ಅಂಗಡಿಗಳನ್ನು ತೆರವುಗೊಳಿಸಿ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳ ಜೀವನೋಪಾಯ ರಕ್ಷಣೆ ಹಾಗೂ ಬೀದಿ ಬದಿ ವ್ಯಾಪಾರದ ನಿಯಂತ್ರಣ ಕಾಯ್ದೆ (2014) ಯನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ. ಯಾವುದೇ ಕಾರಣಕ್ಕೂ ಪೊಲೀಸರು ಕಿರುಕುಳ ನೀಡಬಾರದೆಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ನಗರಸಭೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್, ಬೀದಿ ಬದಿ ವ್ಯಾಪಾರಸ್ಥರ ಸಂಘದ ಸಂಚಾಲಕರಾದ ನಾಗರಾಜ ಪೂಜಾರ್, ಕಾಸಿಂಸಾಬ್ ಕಾರ್ಪೋರೇಟರ್, ಸಾದಿಕ್ ಹುಸೇನ್, ಲಾಲ್‌ಸಾಬ್, ರಸೂಲ್‌ಸಾಬ್, ರಹೀಮ್‌ಸಾಬ್, ಮಹಿಬೂಬ್, ಸಾದಿಕ್ ಮೆಕಾನಿಕ್, ಯಕೂಬ್, ಹುಸೇನ್ ಇನ್ನಿತರರಿದ್ದರು.