

ಸಿಂಧನೂರು: ಮುಳ್ಳೂರು(ಇಜೆ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಸವರಾಜ ಜಾಡರ್ 50 ಸಾವಿರ ರೂ. ವೆಚ್ಚ ಮಾಡಿ ಶಾಲೆಯ ಆವರಣದಲ್ಲಿ ನರ್ಸರಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಬಸವರಾಜ ಜಾಡರ್‌ಗೆ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.
ಶಾಲೆಯ ಆವರಣದಲ್ಲಿ ಶ್ರೀ ಮಲ್ಲಿಕಾರ್ಜುನ ನರ್ಸರಿ ಹೆಸರಿನಲ್ಲಿ ನುಗ್ಗೆ, ಬದಾಮಿ, ಹುಣಸೆ, ಹಲಸು, ಸೀತಾಫಲ, ಹೊಂಗೆ, ಪೇರಲ, ಬೇವು, ಚೆರ‌್ರಿ ಇತರ ವಿವಿಧ ತಳಿಯ 10 ಸಾವಿರ ಸಸಿಗಳನ್ನು ಬೆಳೆಸಿದ್ದಾರೆ. ಕರೊನಾ ಮೊದಲ ಮತ್ತು ಎರಡನೇ ಅಲೆ ವೇಳೆ ಶಾಲೆಗಳಿಗೆ ರಜೆ ಘೋಷಿಸಿದ್ದಾಗ ಶಿಕ್ಷಕ ಬಸವರಾಜ ಜಾಡರ್ ಸ್ವಂತ ಹಣದಲ್ಲಿ ನರ್ಸರಿ ಮಾಡಿದ್ದಾರೆ. ಮಕ್ಕಳ ದಾಖಲಾತಿ, ಕಲಿಕೆ, ಶೈಕ್ಷಣಿಕ ಅಭಿವೃದ್ಧಿ, ಪ್ರಬಂಧ, ಲೇಖನ, ಪುಸ್ತಕ ಪ್ರಕಟಣೆ, ಸೇವಾ ನಿರತ ತರಬೇತಿ, ಸಹಪಠ್ಯ ಚಟುವಟಿಕೆ ಇತರ ವಿವಿಧ ಅಂಶಗಳಿಂದಾಗಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.