ಅತಿಕ್ರಮಣದಾರರಿಗೆೆ ನೋಟಿಸ್ ಜಾರಿ

Sindhanour road cutting markout
ಸಿಂಧನೂರು- ಹೆಮ್ಮಡಗ ರಾಜ್ಯ ಹೆದ್ದಾರಿ ಮಾರ್ಗದ ರಸ್ತೆ ಮಧ್ಯದಿಂದ 15 ಮೀಟರ್ ಇರುವಂತೆ ಮಾರ್ಕ್‌ಔಟ್ ಮಾಡಿರುವುದು.
Published on

ಸಿಂಧನೂರು: ತಾಲೂಕು ಅತೀ ವೇಗದಲ್ಲಿ ಬೆಳೆಯುತ್ತಿದ್ದು ಟ್ರಾಫಿಕ್ ಸಮಸ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಮೂಲ ಕಾರಣ ರಾಜ್ಯ ಹೆದ್ದಾರಿ ಅತಿಕ್ರಮಣಕ್ಕೆ ಒಳಗಾಗಿದ್ದರಿಂದ ಕಿರಿದಾದ ರಸ್ತೆ ಮಾರ್ಗದಲ್ಲಿ ಸಾಗುವುದೇ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ಮಾಡಿ, ಮೂರು ದಿನದೊಳಗೆ ಅತಿಕ್ರಮಿತ ಪ್ರದೇಶವನ್ನು ತೆರವುಗೊಳಿಸಿಕೊಳ್ಳುವಂತೆ ಸೂಚಿಸಿದೆ.

ನಗರ ಪ್ರದೇಶವನ್ನು ಹಾದು ಹೋಗುವ ಸಿಂಧನೂರು-ಹೆಮ್ಮಡಗ ರಾಜ್ಯ ಹೆದ್ದಾರಿ-30 ರಸ್ತೆಯ ಬದಿಯಲ್ಲಿಯ ಸಿಂಧನೂರು ಪಟ್ಟಣ ಪರಿಮಿತಿಯಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿ, ಗುಡಿಸಲು ಹಾಗೂ ಇತರೆ ವಸ್ತುಗಳನ್ನು ಹಾಕಿಕೊಂಡಿದ್ದನು ಕರ್ನಾಟಕ ಉಚ್ಚ ನ್ಯಾಯಾಲಯದ ಸೂಚನೆಯಂತೆ ಅತಿಕ್ರಮಣ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ಕೆಲವು ರಸ್ತೆಗಳಲ್ಲಿ ಪುನಃ ತಾತ್ಕಾಲಿಕವಾಗಿ ಶೆಡ್, ಫುಟ್‌ಪಾತ್‌ನ್ನು ಅತಿಕ್ರಮಿಸಿರುವುದನ್ನು ಪ್ರಶ್ನಿಸಿ, ಕೂಡಲೇ ಅತಿಕ್ರಮಿಸಿಕೊಂಡಿರುವ ಭಾಗವನ್ನು ತಕ್ಷಣದಿಂದ ತೆರವುಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆ ಕಟ್ಟುನಿಟ್ಟಿನ ನೋಟಿಸ್ ನೀಡಿದೆ.

ನಗರದ ಕುಷ್ಟಗಿ ಹೆದ್ದಾರಿ, ರಾಯಚೂರು ಹೆದ್ದಾರಿ ಹಾಗೂ ಗಂಗಾವತಿ ಮಾರ್ಗದ ರಾಜ್ಯ ಹೆದ್ದಾರಿಗಳಲ್ಲಿ ಅಂಗಡಿ-ಮುಗ್ಗಟ್ಟುಗಳ ಮುಂದೆ ಪ್ರತ್ಯೇಕವಾಗಿ ಡಬ್ಬಾ ಅಂಡಗಿ, ಶೆಡ್ ನಿರ್ಮಾಣ ಸೇರಿದಂತೆ ಇತರ ವಸ್ತುಗಳನ್ನು ಹಾಕಿಕೊಂಡಿದ್ದರಿಂದ ಜನರ ಸಂಚಾರ, ವಾಹನ ಸಂಚಾರಕ್ಕೆ ತೊಂದರೆ ಅನುಭವಿಸಬೇಕಿದೆ.

ಈಗಾಗಲೇ ಒಂದು ಬಾರಿ ನೋಟಿಸ್ ಜಾರಿ ಮಾಡಿದ್ದು ಯಾರು ಅತಿಕ್ರಮಿತ ಪ್ರದೇಶ ತೆರವು ಮಾಡಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯವು ಕಟ್ಟುನಿಟ್ಟಿನ ಆದೇಶವನ್ನು ನೀಡಿದ್ದರಿಂದ ಸಭೆ ನಡೆಸಿ ಲಿಂಗಸುಗೂರು ಸಹಾಯಕ ಆಯುಕ್ತರು ಕೂಡ ಇಲಾಖೆಯಿಂದ ನೋಟಿಸ್ ಜಾರಿ ಮಾಡುವಂತೆ ಸೂಚಿಸಿದ್ದರಿಂದ ಲೋಕೋಪಯೋಗಿ ಇಲಾಖೆಯು ರಾಜ್ಯ ಹೆದ್ದಾರಿ ಮಾರ್ಗದ ಮಧ್ಯ ಭಾಗದಿಂದ 15 ಮೀಟರ್ ಇರುವಂತೆ ಮಾರ್ಕ್‌ಔಟ್ ಮಾಡಿ ಗುರುತು ಹಾಕಿದ್ದು ಮೂರು ದಿನದೊಳಗೆ ತೆರವುಗೊಳಿಸಿ ಕೊಳ್ಳಬೇಕೆಂದು ಸೂಚಿಸಿದೆ.

ಸಿಂಧನೂರು-ಹೆಮ್ಮಡಗ ರಾಜ್ಯ ಹೆದ್ದಾರಿ-30 ರಸ್ತೆ ಬದಿಯಲ್ಲಿ ರಸ್ತೆ ಅತಿಕ್ರಮಿತ ಪ್ರದೇಶ ತೆರವುಗೊಳಿಸುವಂತೆ ಉಚ್ಚ ನ್ಯಾಯಾಲಯದ ಸೂಚನೆ ಮೇರೆಗೆ ನೋಟಿಸ್ ಜಾರಿ ಮಾಡಿದ್ದು ಮೂರು ದಿನದೊಳಗೆ ಅತಿಕ್ರಮಿತ ಪ್ರದೇಶ ತೆರವುಗೊಳಿಸಬೇಕು. ನಗರಸಭೆಯೊಂದಿಗೆ ಆಯಾ ಅತಿಕ್ರಮಿತ ಅಂಗಡಿ-ಮುಗ್ಗಟ್ಟಗಳ ಬಳಿ ಮಾರ್ಕ್‌ಔಟ್ ಮಾಡಿದ್ದು ಅಲ್ಲಿಯವರೆಗೆ ರಾಜ್ಯ ಹೆದ್ದಾರಿ ಮಾರ್ಗವಿದೆ. ಅತಿಕ್ರಮಿತವಾಗಿದ್ದರೆ ಕೂಡಲೇ ತೆರವು ಮಾಡಿಕೊಳ್ಳಬೇಕು. | ಹೊನ್ನೇಶ ಅಲ್ಲಗಿ ಎಇಇ, ಲೋಕೋಪಯೋಗಿ ಇಲಾಖೆ ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net