

ಸಿಂಧನೂರು: ತಾಲೂಕಿನಲ್ಲಿ ಸ್ಲಂ ಬೋರ್ಡ್ ಮನೆ ನಿರ್ಮಾಣದಲ್ಲಿ ಅಕ್ರಮ ನಡೆದಿದ್ದರೆ ಕೂಡಲೇ ತನಿಖೆಗೆ ಆದೇಶಿಸಲಾಗುವುದು. ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ತಿಳಿಸಿದರು.
ನಗರದಲ್ಲಿ ಶಾಸಕ ಹಂಪನಗೌಡ ಬಾದರ್ಲಿ ನಿವಾಸದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿದರು. ಸ್ಲಂ ಬೋರ್ಡ್ ಮನೆ ನಿರ್ಮಾಣದಲ್ಲಿ ಅಧಿಕಾರಿ, ಗುತ್ತಿಗೆದಾರ ಶಾಮೀಲಾಗಿರುವ ದೂರುಗಳು ಬಂದಿವೆ. ಫಲಾನುಭವಿಗಳಿಗೆ 2 ಲಕ್ಷ ರೂ.ದಂತೆ ನೀಡಿ, ಉಳಿದ ಹಣ ಲಪಟಾಯಿಸುವ ದೂರು ಸಾಬೀತಾದರೆ ಕ್ರಮ ಕೈಗೊಳ್ಳಲಾಗುವುದು. ಫಲಾನುಭವಿಗಳ ಹಣ ದುರುಪಯೋಗಕ್ಕೆ ಅವಕಾಶ ಇಲ್ಲ. ಸರ್ಕಾರ ನೀಡುವ 7.50 ಲಕ್ಷ ರೂ.ದಲ್ಲಿ ಫಲಾನುಭವಿಗಳು ಗುಣಮಟ್ಟದ ಮನೆ ಕಟ್ಟಿಕೊಳ್ಳಬೇಕು ಎಂದರು.
ರಾಯಚೂರು ಜಿಲ್ಲೆಗೆ ಸ್ಲಂ ಬೋರ್ಡ್‌ನಿಂದ 6 ಸಾವಿರ ಮನೆಗಳು ಮಂಜೂರಾಗಿವೆ. ಈ ಪೈಕಿ 3000 ಮನೆಗಳು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿ 1.84 ಲಕ್ಷ ಮನೆ ನಿರ್ಮಾಣದಲ್ಲಿ 36 ಸಾವಿರ ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ಇನ್ನೂ ಆಗಸ್ಟ್ ಮಾಸಾಂತ್ಯದೊಳಗೆ ಇನ್ನೂ 38 ಸಾವಿರ ಮನೆಗಳು ಪೂರ್ಣಗೊಳ್ಳಲಿವೆ. ಜು.30 ರಂದು ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮನೆಗಳ ನಿರ್ಮಾಣದ ಬಗ್ಗೆ ಪ್ರಗತಿ ಪರಿಶೀಲನೆ ಸಭೆ ನಡೆಸಿ, ಸಮಸ್ಯೆ ಇದ್ದಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಸಿಂಧನೂರು ನಗರದಲ್ಲಿ ಸ್ಲಂ ಬೋರ್ಡ್ ಮನೆಗಳ ನಿರ್ಮಾಣದಲ್ಲಿ ಆಗಿರುವ ಅಕ್ರಮದ ಬಗ್ಗೆ ಪತ್ರಕರ್ತರ ಪ್ರಶ್ನೆ ಆಲಿಸಿ, ಸ್ಥಳದಲ್ಲಿದ್ದು ಸ್ಲಂಬೋರ್ಡ್ ಇಇ ಖಯೀಮ್‌ರನ್ನು ತರಾಟೆಗೆ ತೆಗೆದುಕೊಂಡು ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಮಾಹಿತಿ ಕೇಳಿದರೆ ಏಕೆ ? ಕೊಡುತ್ತಿಲ್ಲ. ಗುತ್ತಿಗೆದಾರರು ಫಲಾನುಭವಿಗೆ 2 ಲಕ್ಷ ರೂ. ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಈ ಅಕ್ರಮದ ಬಗ್ಗೆ ಮಾಹಿತಿ ಬೇಕೆಂದರು. ಶಾಸಕ ಹಂಪನಗೌಡ ಬಾದರ್ಲಿ ಕೂಡ ಧ್ವನಿಗೂಡಿಸಿ, ಸಿಂಧನೂರಿನಲ್ಲಿ ಸ್ಲಂ ಬೋರ್ಡ್ ಮನೆ ನಿರ್ಮಾಣದಲ್ಲಿ ಫಲಾನುಭವಿ ಆಯ್ಕೆ ಗಮನಕ್ಕಿಲ್ಲ. ಅಕ್ರಮದ ಬಗ್ಗೆ ಸಾಕಷ್ಟು ದೂರುಗಳಿವೆ ಎಂದರು.