ಬೈಪಾಸ್ ನಿರ್ಮಾಣಕ್ಕೆ ಕಾಲಸನ್ನಿಹಿತ

Sindhanour bypass road map
ಸಿಂಧನೂರಿನ ಬೈಪಾಸ್ ರಸ್ತೆ ನಿರ್ಮಾಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಯಾರಿಸಿರುವ ನೀಲಿನಕ್ಷೆ.
Published on

ಅಶೋಕ ಬೆನ್ನೂರು

ಸಿಂಧನೂರು : ನಗರದಲ್ಲಿ ಮೂರು ಹೈವೇಗಳು ಕೂಡುವುದರಿಂದ ಪದೇಪದೆ ತಲೆದೋರುವ ಟ್ರಾಫಿಕ್ ಸಮಸ್ಯೆ ತಗ್ಗಿಸಲು ಸಿಂಧನೂರು-ಮಸ್ಕಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕಾಲ ಸನ್ನಿಹಿತವಾಗಿದೆ.

ಬೈಪಾಸ್ ರಸ್ತೆ ಬೇಡಿಕೆ ಕಳೆದ ಹನ್ನೆರಡು ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಹಿಂದಿನ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ವಿಶೇಷ ಕಾಳಜಿಯಿಂದ ಈಗಾಗಲೇ ಬೈಪಾಸ್ ರಸ್ತೆಗೆ ಸಂಬಂಧಿಸಿದಂತೆ ಭೂಸ್ವಾಧೀನಗೊಳ್ಳುವ ಭೂಮಿ, ತಗಲುವ ವೆಚ್ಚ, ನಂತರ ರಸ್ತೆ ನಿರ್ಮಾಣದ ಬಗ್ಗೆ ಮಾಹಿತಿ ಕಲೆ ಹಾಕಿ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ವರದಿ ಸಲ್ಲಿಕೆಯಾಗಿತ್ತು. ಡಿಪಿಆರ್ ಕೂಡ ತಯಾರಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರೇಳು ಗ್ರಾಮ ವ್ಯಾಪ್ತಿಯಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ ನೀಲಿ ನಕ್ಷೆ ಸಿದ್ಧಪಡಿಸಲಾಗಿತ್ತು. ಈಗ ಅದು ಅನುಷ್ಠಾನಕ್ಕೆ ತರಲು ಸಿದ್ಧತೆಯೂ ನಡೆದಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ 132.80 ಕೋಟಿ ರೂ. ಅನುದಾನ ಮಂಜೂರಾಗಿದೆ. ಭೂಮಿ ನೀಡಿದ ರೈತರಲ್ಲಿ ಶೇ.60 ಭೂ ಮಾಲೀಕರಿಗೆ ಪರಿಹಾರ ಮೊತ್ತ ಪಾವತಿಸಲಾಗಿದೆ. ಉಳಿದವರಿಗೆ ಹಣ ನೀಡಬೇಕಿದ್ದು, ಸಂದಾಯ ಮಾಡಿದರೆ ಬೈಪಾಸ್ ರಸ್ತೆ ಕಾಮಗಾರಿ ಆರಂಭವಾಗಲಿದೆ.

ಬೈಪಾಸ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ 50-50 ಅನುದಾನ ಹಂಚಿಕೆ ಮಾಡಿಕೊಂಡಿದ್ದು ವಿಶೇಷ ಆಸಕ್ತಿ ತಳಿದು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಕೇಂದ್ರ ಸರ್ಕಾರ ಅನುದಾನ ಸೇರಿದೆ. ಬೈಪಾಸ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಸಂಸದರು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ವ್ಯವಹಾರ ನಡೆಸಿದ್ದು, ಈಗ ಕಾಲ ಕೂಡಿ ಬಂದಿದೆ. ಸಿಂಧನೂರು-ಮಸ್ಕಿ ಬೈಪಾಸ್ ರಸ್ತೆ ಏಕಕಾಲಕ್ಕೆ ಮಂಜೂರಾತಿ ಪಡೆದಿದ್ದು, ನಿರ್ಮಾಣ ಕಾರ್ಯವೂ ಆರಂಭಗೊಳ್ಳಲಿದೆ. ಒಟ್ಟಾರೆ ಸಿಂಧನೂರು ಜನತೆಗೆ ಬಹುದಿನಗಳ ಬೇಡಿಕೆ ಈಡೇರುವ ಕಾಲಸನ್ನಿಹಿತವಾಗಿದೆ.

ಭೂಸ್ವಾಧೀನ ಬಹುತೇಕ ಪೂರ್ಣ

ಸಿಂಧನೂರು ನಗರ ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೇ.60 ಜನರಿಗೆ ಹಣವನ್ನೂ ಪಾವತಿಸಲಾಗಿದೆ. ಇನ್ನೂ ಕೆಲವರು ಭೂಮಿ ದಾಖಲಾತಿ ನೀಡಬೇಕಿದೆ. ಸಿಂಧನೂರು ವ್ಯಾಪ್ತಿಯಲ್ಲಿ 11.65 ಕಿಮೀ ಹಾಗೂ ಮಸ್ಕಿ ಪಟ್ಟಣದಲ್ಲಿ ಬೈಪಾಸ್ ರಸ್ತೆ ನಿರ್ಮಾಣಕ್ಕೆ 45.25 ಹೆಕ್ಟೇರ್ ಪೈಕಿ 20 ಎಕರೆ ಭೂಸ್ವಾಧೀನಗೊಳ್ಳಬೇಕಿದ್ದು 8.485 ಕಿಮೀ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ. ಭೂಸ್ವಾಧೀನಕ್ಕೆ 132.80 ಕೋಟಿ ರೂ. ಮಂಜೂರಾತಿ ನೀಡಿದೆ. ಬೈಪಾಸ್ ರಸ್ತೆ ನಿರ್ಮಾಣದ ಜವಾಬ್ದಾರಿ ಕೇಂದ್ರ ಸರ್ಕಾರ ವಹಿಸಲಿದ್ದು ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡರೆ ಈ ಭಾಗದ ಜನರಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಸಿಗಲಿದೆ.

ಸಿಂಧನೂರು-ಮಸ್ಕಿ ಬೈಪಾಸ್ ಕಾಮಗಾರಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಹಣಕಾಸು ಅನುಮೋದನೆ ಕಳಿಸಲಾಗಿತ್ತು. ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 132.80 ಕೋಟಿ ರೂ. ಅನುದಾನ ನೀಡಿದ್ದು, ಬಹುತೇಕ ಭೂಮಾಲೀಕರಿಗೆ ಹಣ ಪಾವತಿಯಾಗಿದೆ. ಇನ್ನೂ ಕೆಲವರು ಭೂಮಿ ದಾಖಲಾತಿ ನೀಡಬೇಕಿದ್ದು, 15 ದಿನದೊಳಗೆ ಈ ಕಾರ್ಯ ಚುರುಕುಗೊಳ್ಳಲಿದೆ. | ವಿಜಯಕುಮಾರ ಪಾಟೀಲ್ ಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ವಿಜಯಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net