

ಸಿಂಧನೂರು: ಶಂಭು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿಯ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಬೇಕೆಂದು ಒತ್ತಾಯಿಸಿ ಕಿಸಾನ್ ಮೋರ್ಚಾ ತಾಲೂಕು ಸಮಿತಿ ನಗರದಲ್ಲಿ ತಹಸಿಲ್ ಕಚೇರಿ ಶಿರಸ್ತೇದಾರ್ ಅಂಬಾದಾಸ್‌ಗೆ ಮನವಿ ಸಲ್ಲಿಸಿತು.
ಕೇಂದ್ರ ಸರ್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳ ವಾಪಸ್, ಕಾನೂನಾತ್ಮಕ ಎಂಎಸ್‌ಪಿ ಜಾರಿ, ವಿದ್ಯುತ್ ಖಾಸಗೀಕರಣ ಮಾಡಬಾರದೆಂದು ದೆಹಲಿ ಹೊರವಲಯದಲ್ಲಿ 13 ತಿಂಗಳ ಕಾಲ ಚಳವಳಿ ನಡೆಸಲಾಯಿತು. ಆಗ 700 ಕ್ಕೂ ಹೆಚ್ಚು ರೈತರು ಹುತಾತ್ಮರಾದರು. ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಿತು. ಆದರೆ, ಎಂಎಸ್‌ಪಿ ಕಾನೂನಾತ್ಮಕ ಜಾರಿ ಮಾಡುವುದಾಗಿ ಲಿಖಿತ ಭರವಸೆ ಕೊಟ್ಟು 2 ವರ್ಷ ಕಳೆದರೂ ಈಡೇರಿಸಿಲ್ಲ. ಹೀಗಾಗಿ ಮತ್ತೆ ಹರಿಯಾಣದ ಶಂಭು ಗಡಿಯಲ್ಲಿ 8 ತಿಂಗಳಿಂದ ರೈತರು ಹೋರಾಟ ನಡೆಸಿದ್ದಾರೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಚಳವಳಿಯಲ್ಲಿ ರೈತ ನಾಯಕ ಜಗತ್‌ಸಿಂಗ್ ದಲ್ಲೈವಾಲರು 38 ದಿನಗಳಿಂದ ಉಪವಾಸ ಕೈಗೊಂಡಿದ್ದರಿಂದ ಆರೋಗ್ಯ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಬಗ್ಗೆ ಅಪಾರ ಕಾಳಜಿಯುಳ್ಳವರಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಮಾತುಕತೆ ಮೂಲಕ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಗಿ, ತಾಲೂಕು ಅಧ್ಯಕ್ಷ ರಮೇಶ ಪಾಟೀಲ್ ಬೇರ‌್ಗಿ, ಕಾರ್ಯದರ್ಶಿ ಚಿಟ್ಟಿಬಾಬು, ಪ್ರಮುಖರಾದ ಬಿ.ಎನ್.ಯರದಿಹಾಳ, ಪ್ರಸಾದ ಸುಕಾಲಪೇಟೆ, ಮುದುಕಪ್ಪ ನಾಯಕ ಇತರರು ಇದ್ದರು.