

ಸಿಂಧನೂರು: ಬಿಸಿಯೂಟ ನೌಕರರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ತಾಲೂಕು ಸಮಿತಿ ತಹಸಿಲ್ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿತು.
4 ತಿಂಗಳಿಂದ ಆದಾಯವಿಲ್ಲದೆ ನೌಕರರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಕರೊನಾದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಸರ್ಕಾರ ಮಕ್ಕಳಿಗೆ ಮಧ್ಯಹ್ನದ ಬಿಸಿಯೂಟದ ಪಡಿತರವನ್ನು ಮಕ್ಕಳ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಶಿಕ್ಷಕರು, ಸಿಬ್ಬಂದಿಗೆ ವೇತನ ನೀಡುತ್ತಿದೆ. ಆದರೆ, ಬಿಸಿಯೂಟ ನೌಕರರಿಗೆ ಮಾತ್ರ ವೇತನ ನೀಡಿಲ್ಲ ಎಂದು ನೋವು ತೋಡಿಕೊಳ್ಳಲಾಯಿತು.
ಏಪ್ರಿಲ್‌ನಿಂದ ಶಾಲೆ ಪ್ರಾರಂಭವಾಗುವವರೆಗೆ ಪ್ರತಿ ತಿಂಗಳು ತಿಂಗಳಿಗೆ 7500 ರೂ.ನಂತೆ ವೇತನ ನೀಡಬೇಕು. ಕನಿಷ್ಠ 6 ತಿಂಗಳ ಪಡಿತರ ನೀಡಬೇಕು. ಕೆಲಸ ಕಾಯಂ ಮಾಡಿ, ಶಾಸನಾತ್ಮ ಸವಲತ್ತುಗಳನ್ನು ಜಾರಿ ಮಾಡಬೇಕು. ಎಲ್‌ಐಸಿ ಆಧಾರಿತ ಪೆನ್ಶನ್ ನಿಗದಿ ಮಾಡಬೇಕು. ಕೋವಿಡ್-19 ರ ಭಾಗವಾಗಿ ಕ್ವಾರಂಟೇನ್‌ನಲ್ಲಿದ್ದವರಿಗೆ ಅಡುಗೆ ಮಾಡಿ ಬಡಿಸುತ್ತಿರುವ ನೌಕರರಿಗೆ ವೇತನ ಪಾವತಿಸಬೇಕು. ಐಎಲ್‌ಸಿ ಶಿಫಾರಸ್ಸು ಜಾರಿ ಮಾಡಬೇಕು ಎಂದು ಒತ್ತಾಯಿಸಲಾಯಿತು.