

ಸಿಂಧನೂರು: ವಿಜಯದಶಮಿ ಅಂಗವಾಗಿ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದಿಂದ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಗಣವೇಷಧಾರಿಗಳ ಪಥಸಂಚಲನ ಗಮನ ಸೆಳೆಯಿತು.
ನಗರದ ಆರ್‌ಜಿಎಂ ಶಾಲಾ ಮೈದಾನದಿಂದ ಆರಂಭಗೊಂಡ ಪಥಸಂಚಲನವು ಗಾಂಧಿ ವೃತ್ತ, ಬಸವ ವೃತ್ತ, ಮಹಾವೀರ ರಸ್ತೆ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಕನಕ ವೃತ್ತದಿಂದ ಮುಖ್ಯ ರಸ್ತೆಯ ಮಾರ್ಗವಾಗಿ ಮರಳಿ ಆರ್‌ಜಿಎಂ ಶಾಲಾ ಮೈದಾನ ತಲುಪಿತು. ದಾರಿಯುದ್ದಕ್ಕೂ ಜನರು ಸ್ವಯಂ ಸೇವಕರಿಗೆ ಹೂ ಮಳೆಗೆರೆದರು.
ಐದು ಕಾರ್ಯಕ್ರಮ ಆಯೋಜನೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಬಳ್ಳಾರಿ ವಿಭಾಗದ ಪ್ರಚಾರಕ ಸೋಮಶೇಖರ ಮಾತನಾಡಿ, ಆರ್‌ಎಸ್‌ಎಸ್ ಶತಾಬ್ದಿ ಸಂಭ್ರಮ ನಿಮಿತ್ತ ಸಂಘವು ಪ್ರಮುಖ ಐದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಪಥಸಂಚಲನ, ಗೃಹ ಸಂಪರ್ಕ ಅಭಿಯಾನ, ವಸತಿ ಶಹ ಹಿಂದು ಸಮಾವೇಶ, ಯುವ ಸಮಾವೇಶ, ಗಣ್ಯರ ಗೋಷ್ಠಿ ನಡೆಯಲಿವೆ ಎಂದು ಮಾಹಿತಿ ನೀಡಿದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಜೆಪಿಯ ಪ್ರಮುಖರಾದ ಕೆ.ಕರಿಯಪ್ಪ, ಅಮರೇಗೌಡ ವಿರುಪಾಪುರ, ರಾಜೇಶ ಹಿರೇಮಠ, ಆರ್‌ಎಸ್‌ಎಸ್ ಸ್ವಯಂ ಸೇವಕರು ಭಾಗವಹಿಸಿದ್ದರು.
ಪಥಸಂಚಲನ, ಬಹಿರಂಗ ಕಾರ್ಯಕ್ರಮ ಹಿನ್ನೆಲೆಯಲ್ಲಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿತ್ತು. ದಿಕ್ಸೂಚಿ ಭಾಷಣ ಮಾಡದೆ ಶತಾಬ್ದಿ ಹಿನ್ನೆಲೆಯಲ್ಲಿ ಸಂಘ ಹಮ್ಮಿಕೊಂಡಿರುವ ಕಾರ್ಯಕ್ರಮದ ಮಾಹಿತಿ ಮಾತ್ರ ನೀಡಿ ಸಭೆ ಮುಕ್ತಾಯಗೊಳಿಸಲಾಯಿತು.