ನಾಲ್ಕು ಕೊಠಡಿಗಳ ಛಾವಣಿ ಶಿಥಿಲ - ರೈತನಗರ ಕ್ಯಾಂಪ್‌ನ ಸರ್ಕಾರಿ ಶಾಲೆಗೆ ಬೇಕಿದೆ ದುರಸ್ತಿ ಭಾಗ್ಯ

snd-1
ಸಿಂಧನೂರು ತಾಲೂಕಿನ ರೈತನಗರ ಕ್ಯಾಂಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಛಾವಣಿ ಹಾಳಾಗಿರುವುದು.
Published on

ಸಿಂಧನೂರು: ತಾಲೂಕಿನ ರೈತನಗರ ಕ್ಯಾಪ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಾಲ್ಕು ಕೊಠಡಿಗಳ ಛಾವಣಿ ಶಿಥಿಲಗೊಂಡಿದ್ದು, ಭಯದೊಂದಿಗೆ ಪಾಠ-ಪ್ರವಚನ ನಡೆಸಲಾಗುತ್ತಿದೆ.

ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೆ ಒಟ್ಟು 53 ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದು, ಆರು ಕೊಠಡಿಗಳಿವೆ. ಇದರಲ್ಲಿ ನಾಲ್ಕು ಕೊಠಡಿಗಳು ಶಿಥಿಲಗೊಂಡು ಎರಡು ವರ್ಷಗಳಾಗಿವೆ. ಹೀಗಾಗಿ ಎರಡೇ ಕೊಠಡಿಗಳಲ್ಲಿ 1 ರಿಂದ 7 ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

ಕಳೆದ ವರ್ಷವೇ ಕೊಠಡಿ ಶಿಥಿಲಾವಸ್ಥೆ ಬಗ್ಗೆ ಶಿಕ್ಷಣ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಆದರೆ, ಇದುವರೆಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಇದರಿಂದ ಶಿಕ್ಷಕರು ಭಯದಲ್ಲಿ ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡಬೇಕಿದೆ.

ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹ: ಶಾಲಾ ಆವರಣದಲ್ಲಿರುವ ಎಲ್ಲ ಕೊಠಡಿಗಳು ದುರಸ್ತಿಗೆ ಕಾದಿವೆ. ಎರಡು ಕೊಠಡಿಗಳನ್ನೇ ತರಗತಿ ಮತ್ತು ಕಚೇರಿ ಕೆಲಸಕ್ಕೆ ಬಳಸಲಾಗುತ್ತಿದೆ. ಇದರಿಂದ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುವ ಆತಂಕ ಪಾಲಕರದ್ದು.

ಇನ್ನು ಛಾವಣಿಯ ಸೀಲಿಂಗ್ ಉದುರುತ್ತಿದ್ದು, ಮಕ್ಕಳು ಭಯದಲ್ಲೇ ಪಾಠ ಕೇಳುವ ಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಆಕಸ್ಮಿಕವಾಗಿ ಹಾಳಾಗಿರುವ ಕೊಠಡಿ ಪ್ರವೇಶಿಸಿದರೆ ಆಪತ್ತು ಗ್ಯಾರಂಟಿ ಎನ್ನುವಂತಾಗಿದೆ.

ಈ ಬಗ್ಗೆ ಕ್ರಮ ಕೈಗೊಳ್ಳಬೇಕಿರುವ ಇಲಾಖೆ ಕಣ್ಮುಚ್ಚಿ ಕುಳಿತಿದ್ದು, ಅವಘಡ ಸಂಭವಿಸುವ ಮುನ್ನವೇ ನೂತನ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

=====

ಸಿಂಧನೂರು ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳ ಪಟ್ಟಿ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಎಲ್ಲ ಕೊಠಡಿಗಳ ಅಭಿವೃದ್ಧಿಗೆ ಅನುದಾನ ಬರಲಿದೆ. ಸದ್ಯ ಪಾಠ-ಪ್ರವಚನಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದೇವೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ಬಳಕೆ ಮಾಡದಂತೆ ಎಚ್ಚರಿಕೆ ನೀಡಲಾಗಿದೆ.

> ಬಸಲಿಂಗಪ್ಪ ಹುಡೇದ್, ಬಿಇಒ, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net