

ಸಿಂಧನೂರು: ರಾಯಚೂರು-ಕೊಪ್ಪಳ ಮಾರ್ಗದಲ್ಲಿ 120 ಕಿಮೀವರೆಗೆ ಬೃಹತ್ ವಿದ್ಯುತ್ ಸಂಪರ್ಕ ಕಂಬಗಳ ಅಳವಡಿಕೆ ಮಾಡಲಾಗುತ್ತಿದೆ. ಇದರಲ್ಲಿ ರೈತರ ಭೂ ಸ್ವಾಧೀನ ಮಾಡಿಕೊಳ್ಳದೆ ಪರಿಹಾರ ನೀಡಲಾಗುವುದು ಎಂದು ಲಿಂಗಸುಗೂರು ಸಹಾಯಕ ಆಯುಕ್ತ ಬಸವಣ್ಣಪ್ಪ ಕಲ್‌ಶೆಟ್ಟಿ ತಿಳಿಸಿದರು.
ವಿದ್ಯುತ್ ಸಂಪರ್ಕ ಹಾದು ಹೋಗುವ ತಾಲೂಕಿನ ಜವಳಗೇರಾ, ಕುನ್ನಟಗಿ, ಗುಂಜಳ್ಳಿ, ತುರ್ವಿಹಾಳ ಹೋಬಳಿಗಳ ರೈತರ ಸಭೆಯಲ್ಲಿ ಶನಿವಾರ ಮಾತನಾಡಿದರು. ರಾಯಚೂರು ಪವರ್ ಗ್ರಿಡ್‌ನಿಂದ ಕೊಪ್ಪಳಕ್ಕೆ 7,600 ಕೆವಿ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಪ್ರತಿ ಟವರ್ ಕಂಬವು 700 ಫೀಟ್ ಎತ್ತರದಲ್ಲಿ ತಂತಿಗಳನ್ನು ಅಳವಡಿಸಲಾಗುವುದು. ಪ್ರತಿ ಕಂಬ ಅಳವಡಿಕೆಗೆ 4-6 ಗುಂಟೆ ಜಮೀನು ಬೇಕಾಗುವುದು. ಈ ಜಮೀನನ್ನು ಭೂ ಸ್ವಾಧೀನ ಮಾಡಿಕೊಳ್ಳುವುದಿಲ್ಲ. ರೈತರ ಹೆಸರಿನಲ್ಲೇ ಪಹಣಿ ಇರುತ್ತದೆ. ಭೂ ಪರಿಹಾರ ಹಾಗೂ ಬೆಳೆ ಪರಿಹಾರ ನೀಡಲಾಗುವುದು. ಎಕರೆಗೆ 35 ಲಕ್ಷ ರೂ.ಗಳವರೆಗೆ ನೀಡಲಾಗುವುದು. ಏನೇ ಅವಘಡ ಸಂಭಂವಿಸಿದರೆ ಪವರ್‌ಗ್ರಿಡ್ ಜವಾಬ್ದಾರಿ ಎಂದರು.
ತಹಸೀಲ್ದಾರ್ ಅರುಣ್ ದೇಸಾಯಿ ಮಾತನಾಡಿದರು. ಪವರ್‌ಗ್ರಿಡ್‌ನ ಜನರಲ್ ಮ್ಯಾನೇಜರ್ ಪ್ರಕಾಶ ಯರುಬಂಡಿ, ಇಂಜಿನಿಯರ್ ಮಾದೇಗೌಡ ಎ.ಎಂ, ರೈತರಾದ ದುರುಗಪ್ಪ, ಯಂಕಣ್ಣ, ರಂಗಪ್ಪ, ಕನಕಪ್ಪ, ಸಿದ್ದಪ್ಪ, ಕರಿಯಪ್ಪ, ಮರಿಯಪ್ಪ, ಬಸನಗೌಡ, ವೀರನಗೌಡ, ರಾಮಣ್ಣ, ನಾಗಪ್ಪ ಇದ್ದರು.
ಇದು ಕೇಂದ್ರ ಸರ್ಕಾರದ ಯೋಜನೆ. ರೈತರಿಗೆ ಪರಿಹಾರ ನೀಡಿದ ನಂತರವಷ್ಟೇ ಕಂಬ ಅಳವಡಿಕೆಗೆ ಅವಕಾಶವಿದೆ. ಹೀಗಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ.|ಅರುಣ್ ದೇಸಾಯಿ ತಹಸೀಲ್ದಾರ್