

ಸಿಂಧನೂರು: ತಾಲೂಕಿನ ರಾಗಲಪರ್ವಿ ಕ್ರಾಸ್ ಬಳಿಯ ಗೋದಾಮಿನ ಖರೀದಿ ಕೇಂದ್ರದ ಜೋಳವನ್ನು ಗುರುವಾರ ಕರ್ನಾಟಕ ಫುಡ್ ಕಾಪೋರೇಷನ್ ನಿಗಮ ಎಂಡಿ ಜಗದೀಶ ಕೆ.ಎಂ. ಪರಿಶೀಲಿಸಿದರು.
ನಂತರ ಮಾತನಾಡಿ, ನನ್ನನ್ನು ಯಾವ ರೈತರು ಇಲ್ಲಿಗೆ ಆಹ್ವಾನ ಮಾಡಿಲ್ಲ. ಇಡೀ ರಾಜ್ಯದಲ್ಲಿ ಚರ್ಚಿತ ವಿಷಯವಾಗಿರುವ ಜೋಳ ಖರೀದಿ ಪ್ರಕ್ರಿಯೆ ಹೇಗೆ ನಡೆಯುತ್ತಿದೆ. ರೈತರಿಗೆ ತೊಂದರೆಯಾಗುತ್ತಿದೆಯಾ, ಈಗಾಗಲೇ ಸರ್ಕಾರ ವಿಶೇಷ ಸಭೆ ಮೂಲಕ ನಿರ್ಧರಿಸಿದಂತೆ ಖರೀದಿ ನಡೆಯುವ ಬಗ್ಗೆ ಪರಿಶೀಲಿಸಲಾಗಿದೆ. ಖರೀದಿ ಪ್ರಕ್ರಿಯೆ ವಿಳಂಬವಾಗಿದೆ. ಈಗ ವೇಗ ಹೆಚ್ಚಿಸಿ ಖರೀದಿ ನಡೆಸಲಾಗುತ್ತಿದೆ. ರಾಯಚೂರು ಜಿಲ್ಲೆಯಲ್ಲಿ 9 ಲಾರಿಗಳ ಪೈಕಿ ಒಂದು ಲಾರಿ ಜೋಳ ಮಾತ್ರ ಖರೀದಿ ತಿರಸ್ಕರಿಸಿದ್ದು ಈ ಬಗ್ಗೆ ಮಾಹಿತಿ ಪಡೆಯಲಾಗುವುದು. ಖರೀದಿ ಕೇಂದ್ರದಲ್ಲಿ ನೋಂದಣಿ, ಖರೀದಿ ಎಲ್ಲದನ್ನೂ ನಾನು ಮಾಹಿತಿ ಪಡೆದುಕೊಂಡಿರುವೆ. ಮುಂದೆ ಲೋಪ, ಗೊಂದಲ ಆಗದಂತೆ ನೋಡಿಕೊಳ್ಳಲಾಗುವುದು. ನಿಮ್ಮ ಸಮಸ್ಯೆ ಆಲಿಸಲು ಬಂದಿರುವೆ, ಅದಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಕಲ್ಪಿಸುವೆ ಎಂದು ರೈತರಿಗೆ ಅಭಯ ನೀಡಿದರು. ಆಹಾರ ಇಲಾಖೆ ಡಿಎಂ ಪ್ರಕಾಶ, ಡಿಡಿ ಕೃಷ್ಣ, ತಹಸೀಲ್ದಾರ್ ಅರುಣ್ ದೇಸಾಯಿ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಇದ್ದರು.