ರಾಜ್ಯ ಸರ್ಕಾರದ ತೀರ್ಮಾನಕ್ಕೆ ರೈತರು ಸಹಕಾರ ನೀಡಲಿ

Sindhanour formars meeting to mla
ಸಿಂಧನೂರಿನ ಸರ್ಕಿಟ್ ಹೌಸ್‌ನಲ್ಲಿ ಸೋಮವಾರ ರೈತ ಸಂಘಟನೆಗಳ ಮುಖಂಡರೊಂದಿಗೆ ಶಾಸಕ ಹಂಪನಗೌಡ ಬಾದರ್ಲಿ ಸಭೆ ನಡೆಸಿದರು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ್ ಇದ್ದರು.
Published on

ಸಿಂಧನೂರು: ಜೋಳ ಖರೀದಿಗೆ ಸಂಬಂಧಿಸಿ ನಗರದ ಸರ್ಕಿಟ್ ಹೌಸ್‌ನಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಅವರು ರೈತ ಸಂಘಟನೆಗಳ ಮುಖಂಡರೊಂದಿಗೆ ಸೋಮವಾರ ಸಂಜೆ ಸಭೆ ನಡೆಸಿದರು. ಎಕರೆಗೆ 15 ಬದಲಿಗೆ 20 ಕ್ವಿಂ. ಜೋಳ ಖರೀದಿಸಬೇಕೆಂದು ಮುಖಂಡರು ಒತ್ತಾಯಿಸಿದರು.

ಶಾಸಕ ಬಾದರ್ಲಿ ಮಾತನಾಡಿ, ರೈತ ಸಂಘಟನೆಗಳ ಒಕ್ಕೂಟದ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ, ರೈತರು ನೋಂದಾಯಿಸಿದ ಎಲ್ಲ ಜೋಳವನ್ನು ರಾಜ್ಯ ಉಗ್ರಾಣ ನಿಗಮದಿಂದ ಖರೀದಿಸಲು ಆದೇಶ ಹೊರಡಿಸಿದೆ. ಜೂ.10 ರಿಂದಲೇ ಜೋಳ ಖರೀದಿ ಆರಂಭವಾಗಲಿದೆ. ಸರ್ಕಾರದ ತೀರ್ಮಾನಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಮುಂಗಾರು ಬೆಳೆಯನ್ನು ಪ್ರತಿ ಎಕರೆಗೆ 20 ಕ್ವಿಂ.ನಂತೆ ಖರೀದಿಸಲಾಗಿದೆ. ಈಗ 15 ಕ್ವಿಂ. ಖರೀದಿಸಿದರೆ ಹಿಂಗಾರು ರೈತರಿಗೆ ಅನ್ಯಾಯವಾಗಲಿದ್ದು, ಮುಖ್ಯಮಂತ್ರಿ ಬಳಿ ರೈತ ಸಂಘಟನೆಗಳ ಮುಖಂಡರನ್ನು ನಿಯೋಗ ಕರೆದುಕೊಂಡು ಹೋಗುವಂತೆ ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಾದರ್ಲಿ ಅವರು, ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಿಎಂ ನಿರ್ಧಾರ ಕೈಗೊಂಡಿದ್ದಾರೆ. ಇದರ ಬಗ್ಗೆ ಮತ್ತೆ ಚರ್ಚೆ ಬೇಡವೆಂದು ಹೇಳಿದ್ದಾರೆ. ಆದ್ದರಿಂದ ಆ ಪ್ರಯತ್ನ ಬೇಡ ಎಂದರು. ಅಲ್ಲದೆ ಜೂ.30 ಖರೀದಿಗೆ ಕೊನೆಯ ದಿನವಾಗಿರುವುದರಿಂದ ಸಮರೋಪಾದಿಯಲ್ಲಿ ಖರೀದಿ ಮಾಡಿ ಗೋದಾಮಿಗೆ ಕಳಿಸುವ ಕಾರ್ಯ ನಡೆಯಬೇಕೆಂದು ತಹಸೀಲ್ದಾರ್ ಅರುಣ್ ಎಚ್.ದೇಸಾಯಿಗೆ ಸೂಚನೆ ನೀಡಿದರು.

ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಕೃಷಿ ಬೆಲೆ ಆಯೋಗದ ಸದಸ್ಯ ಡಿ.ಎಚ್.ಪೂಜಾರ್, ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‌ಪಾಷಾ ದಿದ್ದಿಗಿ, ಪ್ರಮುಖರಾದ ಚಂದ್ರಶೇಖರ ಗೊರೇಬಾಳ, ಬಸವರಾಜ ಹಂಚಿನಾಳ, ಬಸವಂತ ರಾಯಗೌಡ ಕಲ್ಲೂರು, ರಮೇಶ ಪಾಟೀಲ್, ವಿರೂಪಾಕ್ಷಗೌಡ, ಆಹಾರ ಇಲಾಖೆ ಶಿರಸ್ತೇದಾರ್ ಆನಂದ ಮೋಹನ್, ನಿರೀಕ್ಷಕ ಹನುಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net