

ಸಿಂಧನೂರು: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಸಿಪಿಐ, ಸಿಪಿಐಎಂಎಲ್, ಸಿಪಿಐ(ಎಂಎಲ್) ಲಿಬಿರೇಷನ್, ಸಿಪಿಐ(ಎಂಎಲ್) ಮಾಸ್‌ಲೈನ್ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.
ಉಗ್ರರು ಅಮಾಯಕರ ಜೀವ ತೆಗೆದಿರುವುದು ಅತ್ಯಂತ ನೋವಿನ ಸಂಗತಿ. ಇನ್ನೂ ಹಲವರು ಗಾಯಗೊಂಡಿದ್ದಾರೆ. ನಾಗರಿಕರು ಮತ್ತು ಪ್ರವಾಸಿಗರ ಮೇಲೆ ನಡೆದ ಈ ಭೀಕರ ಹತ್ಯಾಕಾಂಡವು ಸುಸಂಸ್ಕೃತ ಸಮಾಜದಲ್ಲಿ ಸ್ಥಾನವಿಲ್ಲದ ಹೇಯ ಕೃತ್ಯವಾಗಿದೆ. ಕೇಂದ್ರ ಸರ್ಕಾರ, ಜಮ್ಮು-ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಿಂದ ಸಂತ್ರಸ್ತ ಕುಟುಂಬಗಳಿಗೆ ತಕ್ಷಣವೇ ವೈದ್ಯಕೀಯ, ಆರ್ಥಿಕ ನೆರವು ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಕ್ರೂರ ದಾಳಿಯು ಭದ್ರತೆ-ಗುಪ್ತಚರದಲ್ಲಿನ ಲೋಪಗಳ ಪರಿಶೀಲನೆಯೊಂದಿಗೆ ಸುಸಂಬದ್ಧ ಮತ್ತು ದೃಢವಾದ ಪ್ರತಿಕ್ರಿಯೆಯನ್ನು ಬಯಸುತ್ತದೆ. ಇದರ ಹಿಂದಿರುವ ದುಷ್ಕರ್ಮಿಗಳು, ಯೋಜಕರನ್ನು ಪತ್ತೆಹಚ್ಚಿ ಶೀಘ್ರ ಕಾನೂನು ಕ್ರಮ ಜರುಗಿಸಬೇಕು. ಜನರ ಸುರಕ್ಷತೆಗೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿದರು.
ಪ್ರಮುಖರಾದ ಬಾಷುಮಿಯಾ, ವೆಂಕನಗೌಡ ಗದ್ರಟಗಿ, ನಾಗರಾಜ ಪೂಜಾರ್, ಚಂದ್ರಶೇಖರ, ತಿಪ್ಪಯ್ಯಶೆಟ್ಟಿ, ಬಸವರಾಜ ಎಕ್ಕಿ, ಎಂ.ಗೋಪಾಲಕೃಷ್ಣ, ಚಂದ್ರಪ್ಪ, ಬಸವರಾಜ ಇತರರಿದ್ದರು.