ಭತ್ತಕ್ಕೆ ಪರ್ಯಾಯ ಬೆಳೆಯ ಚಿಂತನೆ ಅಗತ್ಯ; ಮಣ್ಣಿನ ತಜ್ಞ ಡಾ.ಎಸ್.ಭಟ್ ಅನಿಸಿಕೆ

15102022 sindhanoor Workshop by Suco Bank
Published on


ಸುಕೋ ಬ್ಯಾಂಕ್‌ನಿಂದ ಕಾರ್ಯಾಗಾರ ಆಯೋಜನೆ

ಸಿಂಧನೂರು: ಭತ್ತಕ್ಕೆ ಪರ್ಯಾಯ ಬೆಳೆಯ ಚಿಂತನೆ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಬೆಳೆಯಲ್ಲಿ ಬದಲಾವಣೆ ತಂದುಕೊಂಡು ಆರ್ಥಿಕ ಲಾಭದತ್ತ ಹೆಜ್ಜೆ ಹಾಕಬೇಕೆಂದು ರಾಯಚೂರು ಕೃಷಿ ವಿಜ್ಞಾನ ಕೇಂದ್ರದ ಮಣ್ಣಿನ ತಜ್ಞ ಡಾ.ಎಸ್.ಭಟ್ ಹೇಳಿದರು.

ನಗರದ ಎಪಿಎಂಸಿ ಸಭಾ ಭವನದಲ್ಲಿ ಶನಿವಾರ ಸುಕೋ ಬ್ಯಾಂಕ್ ಮತ್ತು ಫಾರ್ಮ್ ಟಿವಿ ಆಯೋಜಿಸಿದ್ದ ಭತ್ತಕ್ಕೆ ಪರ್ಯಾಯವಾಗಿ ಅಧಿಕ ಆದಾಯದ ಹೊಸ ಬೆಳೆಗಳ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ತುಂಗಭದ್ರಾ-ಕೃಷ್ಣಾ ನದಿಗಳ ನೀರಿನ ಲಭ್ಯತೆಯಿದ್ದು ವೈವಿಧ್ಯ ಬೆಳೆ ಪಡೆಯಲು ಅವಕಾಶ ಸಾಕಷ್ಟಿದೆ ಎಂದರು.

ಅಚ್ಚುಕಟ್ಟು ಪ್ರದೇಶ ಜಮೀನಿನ ಪೈಕಿ ಶೇ.8 ಮಾತ್ರ ಭತ್ತ ಬೆಳೆಯಬೇಕಾಗಿದೆ. ಆದರೆ, ಮುಂಗಾರು ಹಂಗಾಮಿನಲ್ಲಿ ಶೇ.40 ಹಾಗೂ ಹಿಂಗಾರಿನಲ್ಲಿ ಶೇ.25 ಭತ್ತ ಬೆಳೆಯಲಾಗುತ್ತಿದೆ. ಹೆಚ್ಚಿನ ನೀರಿನ ಬಳಕೆ, ರಸಗೊಬ್ಬರದಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿದೆ. ಇದರಿಂದಾಗಿ ಮಣ್ಣಿನ ಅಂಶ ಕಾಪಾಡಬೇಕಿದೆ. ಮಣ್ಣಿನ ಗುಣಧರ್ಮ, ಹವಾಗುಣ ಹಾಗೂ ನೀರಿನ ಆದ್ಯತೆ ಮೇರೆಗೆ ಬೆಳೆ ಬೆಳೆದುಕೊಳ್ಳುವತ್ತ ಚಿತ್ತ ಹರಿಸಬೇಕೆಂದು ಡಾ.ಎಸ್.ಭಟ್ ಹೇಳಿದರು.

ಸುಕೋ ಬ್ಯಾಂಕ್ ಸಂಸ್ಥಾಪಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮನೋಹರ ಮಸ್ಕಿ ಮಾತನಾಡಿ, ಏಷ್ಯಾದಲ್ಲಿಯೇ ರಾಯಚೂರು ಎಪಿಎಂಸಿ ಅತಿ ದೊಡ್ಡ ಮಾರುಕಟ್ಟೆಯಾಗಿದೆ. ಈ ಹಿಂದೆ ಹೆಚ್ಚಾಗಿ ಹತ್ತಿ ಬೆಳೆಯಲಾಗುತ್ತಿತ್ತು. ಈಗ ಭತ್ತ ಬೆಳೆಯುತ್ತಿದ್ದೇವೆ. ಈ ಭಾಗದಲ್ಲಿ ಲಕ್ಷಾಂತರ ಎಕರೆ ಇರುವ ನೀರಾವರಿ ಭೂಮಿಯಲ್ಲಿ ಭತ್ತಕ್ಕೆ ಪರ್ಯಾಯವಾಗಿ ತೆಂಗು, ಅಡಿಕೆ, ಉಪಬೆಳೆಯಾಗಿ ಕೋಕೋ ಬೆಳೆ ಉತ್ತೇಜಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ. ಮಳೆಯಾಶ್ರಿತ ಕೆಂಪು ಭೂಮಿಯಲ್ಲಿ ಗೋಡಂಬಿ, ಅಲ್ಪ ಪ್ರಮಾಣದಲ್ಲಾದರೂ ಪ್ರಾಯೋಗಿಕವಾಗಿ ಕಾಳು ಮೆಣಸು, ಕಾಫಿ ಮುಂತಾದ ಆರ್ಥಿಕ ಬೆಳೆಗಳನ್ನು ಪರಿಚಯಿಸುವ ಪ್ರಯತ್ನ ನಡೆಯಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net