

ಸಿಂಧನೂರು: ತಾಲೂಕಿನ ತುಂಗಭದ್ರಾ ಎಡದಂಡೆ ಕಾಲುವೆ ವ್ಯಾಪ್ತಿಯ 31 ರಿಂದ 56 ವರೆಗಿನ ಉಪನಾಲೆಗಳ ದುರಸ್ತಿಗೆ ಈ ವರ್ಷವೂ ಅನುದಾನ ಹಾಗೂ ನಿರ್ವಹಣೆಗೆ ಸಿಬ್ಬಂದಿ ಇಲ್ಲದೆ ಕಾಲುವೆಗಳೆಲ್ಲ ಸಂಪೂರ್ಣ ಹಾಳಾಗಿವೆ.
ತಾಲೂಕಿನಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶ ಹಾಗೂ ಟೇಲೆಂಡ್ ಭಾಗದ 15 ಸಾವಿರ ಎಕರೆ ಪ್ರದೇಶದಲ್ಲಿ ತುಂಗಭದ್ರಾ ಎಡದಂಡೆ ನಾಲೆ ನೀರನ್ನು ನಂಬಿಕೊಂಡೇ ರೈತರು ಕೃಷಿ ಮಾಡುತ್ತಿದ್ದಾರೆ. ನೀರಾವರಿ ಪ್ರದೇಶದಲ್ಲಿ ಮುಂಗಾರು ಮತ್ತು ಹಿಂಗಾರಿನಲ್ಲಿ ಸಂಪೂರ್ಣ ಭತ್ತ ಬೆಳೆದರೆ, ಟೇಲೆಂಡ್‌ನಲ್ಲಿ ಜೋಳ, ತೊಗರಿ, ಹತ್ತಿ ಬೆಳೆಯಲಾಗುತ್ತದೆ.
ತಾಲೂಕು ವ್ಯಾಪ್ತಿಯಲ್ಲಿ 31 ನೇ ಕಾಲುವೆಯಿಂದ 58 ವರೆಗೆ ಉಪಕಾಲುವೆಗಳಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. ಆದರೆ, ಕಳೆದ ಆರೇಳು ವರ್ಷಗಳಿಂದ ಉಪಕಾಲುವೆ ದುರಸ್ತಿಗೆ ಬಿಡಿಗಾಸು ಅನುದಾನ ಬಿಡುಗಡೆಯಾಗದ ಕಾರಣ ಮೇಲ್ಭಾಗದಲ್ಲಿ ಯಥೇಚ್ಛವಾಗಿ ನೀರು ಹರಿದು ಕೆಳ ಭಾಗಕ್ಕೆ ತಲುಪದಂತಾಗಿ ರೈತರು ಬೆಳೆ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಮುಂಗಾರು ಹಂಗಾಮಿಗಿಂತ ಹಿಂಗಾರಿನಲ್ಲಿಯೇ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ನಷ್ಟ ಅನುಭವಿಸಬೇಕಿದೆ.
ಕೆಳ ಭಾಗಕ್ಕಿಲ್ಲ ನೀರು: ತಾಲೂಕಿನ 36 ಮತ್ತು 54ನೇ ಉಪಕಾಲುವೆ ಅತಿ ಹೆಚ್ಚು ಭೂಮಿಗೆ ನೀರುಣಿಸುತ್ತಿದ್ದು, ಈ ಕಾಲುವೆಯ ಮೇಲ್ಭಾಗದಲ್ಲಿ ಹಾಳಾಗಿರುವುದರಿಂದ ಕೆಳ ಭಾಗಕ್ಕೆ ನೀರು ಹರಿಯದೇ ಮೇಲ್ಭಾಗದಲ್ಲಿ ವ್ಯರ್ಥವಾಗುತ್ತಿದೆ. ಈ ಎರಡು ಕಾಲುವೆ ವ್ಯಾಪ್ತಿಯ ಜಮೀನುಗಳ ರೈತರು ನೀರಿಗಾಗಿ ಹೋರಾಟ ಮಾಡುವುದು ತಪ್ಪಿಲ್ಲ. ಭತ್ತದ ಬೆಳೆ ಕಾಳು ತುಂಬುವ ಹಂತದಲ್ಲಿ ನೀರು ಹರಿಸಿಕೊಳ್ಳಲು ತಾಪತ್ರಯ ಅನುಭವಿಸುತ್ತಾರೆ.
ಸಿಬ್ಬಂದಿ ಕೊರತೆಯಿಂದ ನಿರ್ವಹಣೆ ಅಸಾಧ್ಯ
ನೀರಾವರಿ ಇಲಾಖೆಯಲ್ಲಿ ಐದು ಸ್ಥಾನಗಳ ಪೈಕಿ ಮೂವರು ಎಇಇ ಕೆಲಸ ಮಾಡುತ್ತಿದ್ದಾರೆ. 22 ಎಇ ಹುದ್ದೆಗಳ ಪೈಕಿ 12, 20 ಕಿರಿಯ ಇಂಜಿನಿಯರ್‌ಗಳ ಹುದ್ದೆಗಳಲ್ಲಿ ಒಂಬತ್ತು ಸ್ಥಾನ ಭರ್ತಿಯಾಗಿದ್ದು, ನಾಲ್ಕು ರೆವಿನ್ಯೂ ಇನ್ಸ್‌ಪೆಕ್ಟರ್ ಹುದ್ದೆ ಖಾಲಿ ಇವೆ. ಇಲಾಖೆಯ ಒಟ್ಟು 108 ಹುದ್ದೆಗಳ ಪೈಕಿ 62 ಮಂದಿ ಕಾರ್ಯನಿರ್ವಹಿಸುತ್ತಿದ್ದು, 46 ಹುದ್ದೆ ಖಾಲಿ ಉಳಿದಿವೆ. ಇದರಿಂದ ಕಾಲುವೆ ನಿರ್ವಹಣೆಯೂ ಸಾಧ್ಯವಾಗುತ್ತಿಲ್ಲ. ಇಲಾಖೆಗೆ ಹುದ್ದೆ ತುಂಬಲು ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ದೂರುಗಳಿವೆ. ಒಟ್ಟಾರೆ ಇಲಾಖೆಯಲ್ಲಿ ಹುದ್ದೆ ಖಾಲಿ ಜತೆಗೆ ಉಪಕಾಲುವೆಗಳ ದುರಸ್ತಿಗೆ ಅನುದಾನ ಬಿಡುಗಡೆಯಾಗದಿರುವುದು ನೀರಿನ ಸಮಸ್ಯೆಗೆ ಕಾರಣವಾಗಿದೆ. ಪ್ರತಿ ಬೇಸಿಗೆಯಲ್ಲಿ ಕಾಲುವೆ ದುರಸ್ತಿಗೆ ಅನುದಾನದ ನಿರೀಕ್ಷೆ ಹುಸಿಯಾಗುತ್ತಿದೆ. ಉಪಕಾಲುವೆಗಳ ದುರಸ್ತಿಗೆ ಯಾವಾಗ ಕಾಲ ಕೂಡಿ ಬರುವುದೋ ಎನ್ನುವ ಚಿಂತೆ ರೈತರದ್ದಾಗಿದೆ.
ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್ ಹುದ್ದೆಗಳು ಖಾಲಿ ಇವೆ. ಉಪಕಾಲುವೆ ದುರಸ್ತಿಗೆ ಇಲ್ಲಿವರೆಗೆ ಅನುದಾನ ಬಂದಿಲ್ಲ. ಆದರೂ, ರೈತರಿಗೆ ಸಮಸ್ಯೆಯಾಗದಂತೆ ಕೆಳ ಭಾಗಕ್ಕೂ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ. ಬೇಸಿಗೆಯಲ್ಲಿ ಸ್ವಲ್ಪ ಸಮಸ್ಯೆಯಾಗುತ್ತದೆ. ಮುಂಗಾರಿನಲ್ಲಿ ಸಮಸ್ಯೆ ಇಲ್ಲ. ಈಗಾಗಲೇ ಕಾಲುವೆಗೆ ನೀರು ಬಂದಿದ್ದು, ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
> ಸತ್ಯನಾರಾಯಣ ಶ್ರೇಷ್ಠಿ, ಇಇ, ನೀರಾವರಿ ಇಲಾಖೆ, ಸಿಂಧನೂರು
ಸಿಂಧನೂರು ತಾಲೂಕಿನ 36 ಹಾಗೂ 54ನೇ ಉಪಕಾಲುವೆ ವ್ಯಾಪ್ತಿಯ ಕೆಳ ಭಾಗಕ್ಕೆ ನೀರು ಸಮರ್ಪಕವಾಗಿ ಹರಿಯುತ್ತಿಲ್ಲ. ಇದಕ್ಕೆ ಉಪಕಾಲುವೆಗಳು ಹಾಳಾಗಿರುವುದು ಮುಖ್ಯ ಕಾರಣ. ನಾಲೆಗಳ ದುರಸ್ತಿಗೆ ಹಣ ಬಿಡುಗಡೆ ಮಾಡಬೇಕು. ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ತುಂಬಬೇಕು.
> ಬಸವರಾಜ ಹಿರೇಗೌಡ್ರ, ಜಿಪಂ ಮಾಜಿ ಸದಸ್ಯ, ರೌಡಕುಂದ ಕ್ಷೇತ್ರ