ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ

TB Dam
ತುಂಗಭದ್ರಾ
Published on

ಸಿಂಧನೂರು: ಆಧುನಿಕತೆ ವಿಕಾಸದ ಪರಿಕಲ್ಪನೆಯು ವಿನಾಶದೆಡೆಗೆ ಕೊಂಡೊಯ್ಯುತ್ತಿದೆ. ವಿಕಾಸದ ಪರಿಕಲ್ಪನೆ ಸಮೃದ್ಧಿ ಹಾಗೂ ಸಂಸ್ಕೃತಿಯ ಪ್ರತೀಕವಾಗಬೇಕು. ಆದರೆ, ಅಭಿವೃದ್ಧಿ ನೆಪದಲ್ಲಿ ಸಮತೋಲನ ತಪ್ಪುತ್ತಿದ್ದೇವೆ ಎಂದು ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ್ ವೀರಾಪುರ ಹೇಳಿದರು.

ನಗರದ ಕೋಟೆ ವೀರಣ್ಣ ದೇವಸ್ಥಾನದಲ್ಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ಹಾಗೂ ಪರ್ಯಾವರಣ ಟ್ರಸ್ಟ್ ಹಾಗೂ ತುಂಗಭದ್ರಾ ಅಭಿಯಾನ ಸಮಿತಿ ಸಹಯೋಗದಲ್ಲಿ ಶನಿವಾರ ನಿರ್ಮಲ ತುಂಗಭದ್ರಾ ಅಭಿಯಾನ ಮೂರನೇ ಹಂತದ ಪಾದಯಾತ್ರೆ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಆಪ್ತ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಸಿಂಧನೂರು ತಾಲೂಕಿನಲ್ಲಿ ಬೆಳೆಗಳಿಗೆ ಯಥೇಚ್ಛವಾಗಿ ರಾಸಾಯನಿಕಗಳನ್ನು ಬಳಸುತ್ತಿದ್ದು, ಕ್ಯಾನ್ಸರ್ ಪೀಡಿತ ಪ್ರದೇಶವಾಗುವ ಕಾಲ ದೂರವಿಲ್ಲ. ನಮ್ಮ ಸಂಘಟನೆ 2023ರಲ್ಲಿ ಗಂಗಾನದಿ ಶುದ್ಧೀಕರಣದಲ್ಲಿ ಭಾಗವಹಿಸಿತ್ತು.

ತುಂಗಭದ್ರಾ ನದಿ ಮಲಿನಗೊಂಡಿದ್ದು, ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿಯಿದೆ. ಪ್ರಸ್ತುತ ತುಂಗಭದ್ರಾ ನದಿ ಅಪಾಯದ ಅಂಚಿನಲ್ಲಿದೆ.

ಈಗ ನಿರ್ಮಲ ತುಂಗಭದ್ರಾ ಮಾಡಬೇಕೆನ್ನುವ ನಿಟ್ಟಿನಲ್ಲಿ ಕಿಷ್ಕಿಂಧಾದಿಂದ ಮಂತ್ರಾಲಯದವರೆಗೆ 3ನೇ ಹಂತದ ಜಲ, ಜನ ಜಾಗೃತಿ ಆಂದೋಲನ ರೂಪಿಸಲಾಗಿದೆ. ಇದರ ಯಶಸ್ಸಿಗೆ ಎಲ್ಲರೂ ಕೈಜೋಡಿಬೇಕೆಂದು ಮನವಿ ಮಾಡಿದರು.

ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಆಧುನಿಕತೆಯಿಂದ ಪರಿಸರ ಕಲುಷಿತವಾಗಿದೆ. ನದಿ ಪಾತ್ರದಲ್ಲಿರುವ ಕಾರ್ಖಾನೆಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಅನಿವಾರ್ಯತೆಯಿದೆ. ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ ಆಂದೋಲನದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಮಾಜಿ ಸಚಿವ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಐಎಂಎ ಅಧ್ಯಕ್ಷ ಡಾ.ಬಿ.ಎನ್.ಪಾಟೀಲ್, ಮಾಜಿ ಸಚಿವ, ಅಭಿಯಾನದ ದಕ್ಷಿಣ ಭಾರತದ ಉಸ್ತುವಾರಿ ಸಿ.ಪಿ. ಮಾಧವನ್, ಜಿಲ್ಲಾ ಸಂಚಾಲಕ ಉದಯಕುಮಾರ ಸಾಹುಕಾರ, ಕೊಪ್ಪಳ ಜಿಲ್ಲಾ ಸಂಚಾಲಕ ವಿಷ್ಣುತೀರ್ಥ ಜೋಶಿ, ಸಂಚಾಲಕ ರಾಘವೇಂದ್ರ, ಜಿಪಂ ಮಾಜಿ ಸದಸ್ಯ ಪಂಪನಗೌಡ ಬಾದರ್ಲಿ, ಪ್ರಮುಖರಾದ ಡಾ.ಚನ್ನನಗೌಡ ಪಾಟೀಲ್, ಎನ್.ಅಮರೇಶ, ಶಿವನಗೌಡ ಎಲೆಕೂಡ್ಲಿಗಿ, ಈರೇಶ ಇಲ್ಲೂರು, ಮಲ್ಲನಗೌಡ ಮಾವಿನಮಡ್ಗು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net