

ಸಿಂಧನೂರು: ನಗರದ 6ನೇ ವಾರ್ಡ್ ಸದಸ್ಯ ವೀರೇಶ ಹಟ್ಟಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡರು.
ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 9 ಸದಸ್ಯರನ್ನು ಒಳಗೊಂಡ ಸ್ಥಾಯಿ ಸಮಿತಿ ರಚಿಸಿಲು ತೀರ್ಮಾನಿಸಲಾಗಿತ್ತು. ಅದರಂತೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ವೀರೇಶ ಹಟ್ಟಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಒಂದೇ ನಾಮಪತ್ರ ಸ್ವೀಕೃತವಾದ ಕಾರಣ ನಿಯಮಾನುಸಾರ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸ್ಥಾಯಿ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ಕೆ. ಜಬೀನಾ ಬೇಗಂ, ಎಚ್.ಬಾಷಾ, ಆಲಂಬಾಷಾ, ಜಿಲಾನಿ ಪಾಷಾ, ಚಂದ್ರಶೇಖರ ಮೈಲಾರ್, ಸಣ್ಣ ವೀರಭದ್ರಪ್ಪ ಕುರುಕುಂದ, ಶರಣಪ್ಪ ಉಪ್ಪಲದೊಡ್ಡಿ ಹಾಗೂ ಮೆಹಬೂಬ್ ಡೊಂಗ್ರಿ ಆಯ್ಕೆಯಾದರು. ನಗರಸಭೆ ಸಹಾಯಕ ಇಂಜಿನಿಯರ್ ಮನ್ಸೂರ್ ಅಹ್ಮದ್ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ನಗರಸಭೆ ಅಧ್ಯಕ್ಷೆ ಪ್ರಿಯಾಂಕಾ ರೋಹಿತ್, ಉಪಾಧ್ಯಕ್ಷೆ ಮಂಜುಳಾ ಪ್ರಭುರಾಜ, ಪೌರಾಯುಕ್ತ ಮಂಜುನಾಥ ಗುಂಡೂರು ಇದ್ದರು.