

ಸಿಂಧನೂರು: ತೆರಿಗೆಯನ್ನು ಶೇ.5 ಹೆಚ್ಚಳ ಮಾಡುವ ಪ್ರಸ್ತಾವನೆ ಬಗ್ಗೆ ನಗರಸಭೆ ಸದಸ್ಯರ ಪರ-ವಿರೋಧ ಚರ್ಚೆ ಬಳಿಕ ಅಂತಿಮವಾಗಿ ಶೇ.3 ಹೆಚ್ಚಿಸಲು ಸೋಮವಾರ ಏರ್ಪಡಿಸಿದ್ದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಸಭೆ ಆರಂಭದಲ್ಲಿ ತೆರಿಗೆ ಹೆಚ್ಚಳದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಯಾವುದೇ ಕಾರಣಕ್ಕೂ ಆಸ್ತಿ ಸೇರಿ ಇತರ ತೆರಿಗೆ ಹೆಚ್ಚಳ ಬೇಡವೆಂದು ವಿಪಕ್ಷದ ಚಂದ್ರಶೇಖರ ಮೈಲಾರ ಮತ್ತು ಕೆ.ಹನುಮೇಶ ಒತ್ತಾಯಿಸಿದರು. ನಗರದ ಜನತೆಗೆ ಇನ್ನೂ ಹಲವು ಸೌಲಭ್ಯಗಳನ್ನು ಕೊಡಬೇಕಿದೆ. ನಗರಸಭೆಯಿಂದಲೇ ಅಗತ್ಯ ದಾಖಲೆಗಳು ಸೇರಿ ಸೌಲಭ್ಯಗಳು ಸಿಗುತ್ತಿಲ್ಲ. ಫಾರ್ಮ್-3 ಸೇರಿದಂತೆ ಹಲವು ದಾಖಲೆಗಳನ್ನು ಪಡೆಯಲು ಜನರು ಹೆಣಗಾಡುತ್ತಿದ್ದಾರೆ. ಇಂಥ ಸಂದರ್ಭ ತೆರಿಗೆ ಭಾರ ಸಮಂಜಸವಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಪಾಂಡುರಂಗ ಇಟಗಿ, ಸರ್ಕಾರದ ಸುತ್ತೋಲೆ ಪ್ರಕಾರ ಶೇ.3 ರಿಂದ 5 ತೆರಿಗೆ ಹೆಚ್ಚಿಸುವುದು ಅನಿವಾರ್ಯವಾಗಿದ್ದು, ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ಮಲ್ಲಿಕಾರ್ಜುನ ಪಾಟೀಲ್ ಮಾತನಾಡಿ, ಶೇ.2 ರಿಂದ 3 ತೆರಿಗೆ ಹೆಚ್ಚಿಸಿ, ಜನರಿಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದರು. ಕೊನೆಗೆ ಪರ-ವಿರೋಧದ ನಡುವೆ ಶೇ.3 ತೆರಿಗೆ ಹೆಚ್ಚಳಕ್ಕೆ ಸಭೆ ನಿರ್ಧರಿಸಿತು.
ಮುರ್ತುಜಾ ಹುಸೇನ್ ಮಾತನಾಡಿ, ಸಂತೆ ಮಾರುಕಟ್ಟೆ ದರ ನಿಗದಿಪಡಿಸಿ, ಅಷ್ಟೇ ಶುಲ್ಕ ಪಡೆಯಲು ತಿಳಿಸಬೇಕು. ಈಗ ಗುತ್ತಿಗೆ ತೆಗೆದುಕೊಂಡವರು ಹೆಚ್ಚುವರಿ ಹಣ ಪಡೆಯುತ್ತಿರುವ ದೂರುಗಳಿವೆ ಎಂದರು. ಮಧ್ಯಪ್ರವೇಶಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಸಭೆಯಲ್ಲಿ ಚರ್ಚಿತ ವಿಷಯಗಳ ಕುರಿತು ಗಂಭೀರ ಕ್ರಮವಾಗಬೇಕು. ಸಭೆಗೆ ಸೀಮಿತವಾಗುವುದು ಸರಿಯಲ್ಲ. ಸದಸ್ಯರು ಹೇಳುವ ಸಮಸ್ಯೆಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಪೌರಾಯುಕ್ತ ಮಾತನಾಡಿ, ನಾನು ಬಂದಾಗಿಂದ ಯಾವ ಕೆಲಸವೂ ಬಾಕಿ ಉಳಿಸಿಲ್ಲ. ಸಾವಿರ ಸಂಖ್ಯೆಯಲ್ಲಿ ಬಾಕಿ ಇದ್ದ ಫಾರ್ಮ್-3 ವಿಲೇ ಮಾಡಲಾಗಿದೆ. ಜನರನ್ನು ಸತಾಯಿಸಲು ಅವಕಾಶ ನೀಡುವುದಿಲ್ಲ. ಅವಧಿಯೊಳಗೆ ದಾಖಲಾತಿ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಪದೇಪದೆ ಸಭೆಗೆ ಗೈರಾಗಿ, ಜನರಿಗೆ ತೊಂದರೆ ಕೊಡುತ್ತಿರುವ ಬಿಲ್ ಕಲೆಕ್ಟರ್‌ಗಳನ್ನು ಬದಲಿಸುವುದು, ಇಲ್ಲವೆ ಕ್ರಮ ಕೈಗೊಳ್ಳುವಂತೆ ಸದಸ್ಯರು ಪಟ್ಟು ಹಿಡಿದರು. ಪ್ರತಿಕ್ರಿಯಿಸಿದ ಪೌರಾಯುಕ್ತರು, ನೋಟಿಸ್ ನೀಡಿ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಎಂಎಲ್ಸಿ ಬಸನಗೌಡ ಬಾದರ್ಲಿ ಮಾತನಾಡಿ, ಕೆಲಸ ಮಾಡದ, ಸಾರ್ವಜನಿಕರಿಗೆ ತೊಂದರೆ ಕೊಡುವ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮವಾಗಬೇಕು. ಯಾರ ಮುಲಾಜಿಗೂ ಒಳಗಾಗದೆ, ಜನರ ಪರ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು. ಒಳಚರಂಡಿ ಕಾಮಗಾರಿ ಅರೆಬರೆಯಾಗಿರುವುದನ್ನು ಸದನದಲ್ಲಿ ಪ್ರಸ್ತಾಪಿಸಿದ್ದು, ತನಿಖೆಗೆ ಆದೇಶಿಸುವಂತೆ ತಿಳಿಸಿದ್ದೇನೆ. ಹೀಗಾಗಿ ಒಳಚರಂಡಿ ಯೋಜನೆ ಬಗ್ಗೆ ಚರ್ಚೆ ಅನರ್ಥ ಎಂದರು.
ನಗರದ ಮುಖ್ಯ ರಸ್ತೆ, ತರಕಾರಿ ಮಾರುಕಟ್ಟೆ ಬಳಿ, ಶಾಲಾ-ಕಾಲೇಜು ಮಾರ್ಗದಲ್ಲಿರುವ ಮಾಂಸದಂಗಡಿಗಳನ್ನು ತೆರವುಗೊಳಿಸುವಂತೆ ಸಾಕಷ್ಟು ಬಾರಿ ಹೇಳಿದ್ದರೂ ಕ್ರಮವಾಗಿಲ್ಲ. ಜನರು ಆಕ್ರೋಶಗೊಂಡಿದ್ದು, ಮಾಂಸದಂಗಡಿಗೆ ಪ್ರತ್ಯೇಕ ಜಾಗ ಗುರುತಿಸಬೇಕು. ಎಲ್ಲೆಂದರಲ್ಲಿ ಅಂಗಡಿಗಳಿಗೆ ಅವಕಾಶ ನೀಡಬಾರದು. ಈಗ ವಿವಿಧೆಡೆ ತಲೆ ಎತ್ತಿರುವ ಮಾಂಸದಂಗಡಿ ಬಂದ್ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು. ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ ಹಾಗೂ ಸದಸ್ಯರು ಇದ್ದರು.