

ಬಹುಭಾಷಾ ಕವಿಗೋಷ್ಠಿ ಆಯೋಜನೆ
ಸಿಂಧನೂರು: ಎರಡು ಸಾವಿರ ವರ್ಷಕ್ಕಿಂತಲೂ ಹಳೆಯದಾದ ಕನ್ನಡ ಭಾಷೆಯ ಸಾಹಿತ್ಯದಲ್ಲಿ ಭಾರತದ ಹಲವು ಸಂಸ್ಕೃತಿಗಳು ಸಮ್ಮಿಳಿತಗೊಂಡಿವೆ ಎಂದು ಉಪನ್ಯಾಸಕಿ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿ ಸರ್ವಮಂಗಳ ಸಕ್ರಿ ಹೇಳಿದರು.
ನಗರದ ಆದರ್ಶ ಕಾಲನಿಯ ಆನಂದ ಪಬ್ಲಿಕ್ ಸ್ಕೂಲ್‌ನಲ್ಲಿ ಕಸಾಪ ತಾಲೂಕು ಘಟಕ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಮಾತನಾಡಿದರು. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಕನ್ನಡ ಸಾಹಿತ್ಯ ತನ್ನ ಹರಿವನ್ನು ವಿಸ್ತರಿಸಿಕೊಂಡಿದೆ. ಕನ್ನಡ ಸಾಹಿತ್ಯ ಹಲವು ಭಾಷೆಗಳಿಗೆ ತರ್ಜುಮೆಗೊಂಡಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಅರುಣ ದೇಸಾಯಿ ಮಾತನಾಡಿ, ನಮ್ಮ ಭಾಷೆ ಮತ್ತು ಸಂಸ್ಕೃತಿಗಳು ಬೇರೆಯಾಗಿದ್ದರೂ ನಾವೆಲ್ಲರೂ ಭಾರತೀಯರು ಎನ್ನುವ ಹೆಮ್ಮೆ ನಮ್ಮದು. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ದೇಶ ನಮ್ಮದಾಗಿದೆ. ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಬಹುಭಾಷಾ ಕವಿಗೋಷ್ಠಿ ಅರ್ಥಪೂರ್ಣವಾಗಿದೆ ಎಂದರು.