

ಸಿಂಧನೂರು: ಕಳೆದ ನಾಲ್ಕು ವರ್ಷಗಳಿಂದ ಮಕ್ಕಳಿಗೆ ವೇದ ಸಂಸ್ಕಾರ ಶಿಬಿರ ಆಯೋಜಿಸುವ ಮೂಲಕ ಶ್ರೀಮಠವು ಉತ್ತಮ ಕಾರ್ಯ ಮಾಡುತ್ತಿದೆ ಎಂದು ಮಸ್ಕಿ ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಹೇಳಿದರು.
ನಗರದ ಮೂರುಮೈಲ್ ಕ್ಯಾಂಪ್‌ನ ಕರಿಬಸವ ನಗರದ ರಂಭಾಪುರಿ ಶಾಖಾ ಮಠದಲ್ಲಿ ಗುರುವಾರ ಆಯೋಜಿಸಿದ್ದ ವೈದಿಕ ಸಂಸ್ಕಾರ ಶಿಬಿರ ಸಮಾರೋಪ, ಅಯ್ಯಚಾರ ಹಾಗೂ ಶಿವದೀಕ್ಷೆ ಕಾರ್ಯಕ್ರದಲ್ಲಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಸಂಸ್ಕಾರ, ಜೀವನ ಮೌಲ್ಯಗಳು, ಆಧ್ಯಾತ್ಮಿಕ ವಿಚಾರಗಳನ್ನು ಕೇಳುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಬೇಕು. ಜೀವನ ಉನ್ನತಿಯೆಡೆಗೆ ಸಾಗಲು ಅಧ್ಯಾತ್ಮ ಜ್ಞಾನ ಅಗತ್ಯವಿದೆ. ಮೊಗ್ಗಿನಂತಿರುವ ಮಕ್ಕಳ ಹೃದಯಗಳನ್ನು ವಿಕಸನವಾಗುವಂತೆ ಪರಿವರ್ತಿಸಬೇಕು ಎಂದರು.
ರಂಭಾಪುರಿ ಶಾಖಾ ಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿ, ಈ ಆಧುನಿಕ ಯುಗದಲ್ಲಿ ಸಂಸ್ಕಾರಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇದರಿಂದಾಗಿ ಮಕ್ಕಳು ದಾರಿ ತಪ್ಪುವುದನ್ನು ಕಾಣುತ್ತಿದ್ದೇವೆ. ಅವರಿಗೆ ತಮ್ಮ ಭವಿಷ್ಯದ ಬಗ್ಗೆ ಸ್ಪಷ್ಟ ಕಲ್ಪನೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ನಾವು ಕಳೆದ ನಾಲ್ಕು ವರ್ಷದಿಂದ ವೇದ, ಸಂಸ್ಕಾರ ಶಿಬಿರ ನಡೆಸುತ್ತಿದ್ದು, ಉತ್ತಮ ಪ್ರತಿಕ್ರಿಯೆಯೂ ಇದೆ ಎಂದರು.
ತುರ್ವಿಹಾಳ ಪುರವರ ಮಠದ ಅಮರಗುಂಡಯ್ಯ ಸ್ವಾಮೀಜಿ, ರೌಡಕುಂದ ಶಿವಯೋಗಿ ಸ್ವಾಮೀಜಿ, ಬಂಗಾರಿಕ್ಯಾಂಪ್ ಸಿದ್ಧರಾಮೇಶ್ವರ ಶರಣರು, ಚತುರ್ವೇದ ಪುರೋಹಿತರಾದ ಬಪ್ಪೂರ ಶಾಂಭವಿಮಠದ ದೇವಯ್ಯಸ್ವಾಮಿ, ಬಸವರಾಜ ಶಾಸ್ತ್ರಿ ಕೆ. ಹೊಸಳ್ಳಿ, ಬಸಯ್ಯಶಾಸ್ತ್ರಿ, ಮೃತ್ಯುಂಜಯ್ಯ ಶಾಸ್ತ್ರಿ ಗುಂಜಳ್ಳಿ, ಶಿವಶಂಕರಯ್ಯಶಾಸ್ತ್ರಿ, ಪ್ರಶಾಂತ ಶಾಸ್ತ್ರಿ, ಅಮರಯ್ಯ ಶಾಸ್ತ್ರಿ ಎಲೆಕೂಡ್ಲಿಗಿ, ಚನ್ನಪ್ಪ ತಾಳೂರು ಇದ್ದರು.