ಅವಳಿ ರಾಜ್ಯಗಳ ಸಿಎಂಗೆ ಡಿಸಿಎಂ ಶಿವಕುಮಾರ ಪತ್ರ

NS bosaraju
ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು
Published on

ಸಿಂಧನೂರು: ಹಿಂದಿನ ನಮ್ಮ ಸರ್ಕಾರದ ಅವಧಿಯಲ್ಲಿ ನವಲಿ ಬಳಿ ಜಲಾಶಯ ನಿರ್ಮಾಣ ಹಿನ್ನೆಲೆಯಲ್ಲಿ ಡಿಪಿಆರ್ ತಯಾರಿಸಲಾಗಿತ್ತು. ಈಗ ತೆಲಂಗಾಣ, ಆಂಧ್ರ ಸಿಎಂಗಳ ಜತೆಗೆ ಜಲಾಶಯ ನಿರ್ಮಾಣ, ಡಿಪಿಆರ್ ಬಗ್ಗೆ ಚರ್ಚಿಸುವ ಸಂಬಂಧ ಡಿಸಿಎಂ ಡಿ.ಕೆ.ಶಿವಕುಮಾರ ಪತ್ರ ಬರೆದಿದ್ದಾರೆ ಎಂದು ಸಣ್ಣ ನೀರಾವರಿ ಸಚಿವ ಎನ್.ಬೋಸರಾಜು ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಈಗ ಭೂಮಿ ಹೆಚ್ಚಾಗಿದೆ. ಹಿಂದಿನಂತೆ ನೀರಾವರಿ ವ್ಯವಸ್ಥೆ ಇದೆ. ಯಾವುದೂ ಬದಲಾಗಿಲ್ಲ. ಈಗ ಎಡದಂಡೆ ನಾಲೆಗೆ ಹರಿಯುವ ನೀರು ಸಾಕಾಗುತ್ತಿಲ್ಲ. ಎಲ್ಲರೂ ಏಕ ಬೆಳೆ ಬೆಳೆಯುತ್ತಿದ್ದಾರೆ. ಭತ್ತ ಬಿಟ್ಟು ಪರ್ಯಾಯ ಬೆಳೆಯತ್ತ ಆಸಕ್ತಿ ವಹಿಸುತ್ತಿಲ್ಲ. ಈಗ ಏ.20ವರೆಗೆ ನೀರು ಹರಿಸುವ ಬೇಡಿಕೆ ಇದೆ. ಪ್ರತಿ ವರ್ಷ ಬೇಸಿಗೆಯಲ್ಲಿ ಈ ಬೇಡಿಕೆ ಇರುತ್ತದೆ. ಜಲಾಶಯದ ನೀರಿನ ಆಧಾರದಲ್ಲಿ ಕಾಲುವೆ ನೀರು ಹರಿದು ಬರಲಿದೆ. ಅಕ್ರಮ ನೀರಾವರಿ ತಡೆಗೆ ಈ ಹಿಂದೆ ಜಿಲ್ಲಾಧಿಕಾರಿ ವಿಶೇಷ ಕ್ರಮಕೈಗೊಂಡಿದ್ದರು ಎಂದರು.ಸಿಎಂ ಬದಲಾವಣೆ ವಿಚಾರ ಮುನ್ನೆಲೆಗಿಲ್ಲ. ಸಿಎಂ, ಡಿಸಿಎಂ ಒಂದಾಗಿ ರಾಜ್ಯದ ಅಭಿವೃದ್ಧಿ ನಡೆಸಿದ್ದಾರೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ. ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕೆಲಸ ನಿಂತಿಲ್ಲ. ಈಗಾಗಲೇ ನಾಲ್ಕು ಸಾವಿರ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಆಯಾ ವಿಧಾನಸಭೆ ಕ್ಷೇತ್ರಗಳಿಗೆ 100 ಕೋಟಿ ರೂ. ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.

ಸರ್ಕಾರ ಸಣ್ಣ ನೀರಾವರಿ ಇಲಾಖೆಗೆ 450 ಕೋಟಿ ರೂ. ಬಿಡುಗಡೆ ಮಾಡಿದ್ದು, ನಾಲ್ಕು ಸಾವಿರ ಬೋರ್‌ವೆಲ್ ಕೊರೆಸಲು ಅವಕಾಶ ನೀಡಲಾಗಿದೆ. ಸಿಂಧನೂರು ಕ್ಷೇತ್ರಕ್ಕೂ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ಅಮರೇಗೌಡ ಬಯ್ಯಪುರ, ಮಾನ್ವಿ ಶಾಸಕ ಹಂಪಯ್ಯ ನಾಯಕ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net