

ಸಿಂಧನೂರು: ನಗರದ ಕುಷ್ಟಗಿ ರಸ್ತೆಯ ಎಪಿಎಂಸಿ ಪಕ್ಕದ ಟಿಎಪಿಸಿಎಂಎಸ್‌ಗೆ ಸೇರಿದ ಜಾಗದಲ್ಲಿ ಸುಮಾರು 15 ವರ್ಷಗಳಿಂದ ನಡೆಯುತ್ತಿರುವ ಕುರಿ ಮತ್ತು ಜಾನುವಾರು ಮಾರುಕಟ್ಟೆ ಸ್ಥಳಾಂತರಿಸಬಾರದು ಎಂದು ಕುರಿ ಮತ್ತು ಜಾನುವಾರು ವ್ಯಾಪಾರಸ್ಥರ ಸಮಿತಿ ಒತ್ತಾಯಿಸಿದೆ.
ಸಂತೆ ಸ್ಥಳದಿಂದ ಮಿನಿವಿಧಾನಸೌಧದವರೆಗೆ ಸೋಮವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮಂಜುನಾಥ ಭೋಗಾವತಿಗೆ ಮನವಿ ಸಲ್ಲಿಸಿತು. ಟಿಎಪಿಸಿಎಂಎಸ್ ಅಧಿಕಾರಿಗಳು ಪ್ರಭಾವಕ್ಕೆ ಮಣಿದು ಏಕಾಏಕಿ ಸ್ಥಳಾಂತರಕ್ಕೆ ಮುಂದಾಗಿದ್ದು ಖಂಡನೀಯ. ಇದರಿಂದಾಗಿ ರೈತರು, ವ್ಯಾಪಾರಸ್ಥರಿಗೆ ತೊಂದರೆಯಾಗುವುದು. ಕೂಡಲೇ ಅಧಿಕಾರಿಗಳು ತೆರವು ಕಾರ್ಯ ನಿಲ್ಲಿಸಬೇಕು. ಇದನ್ನೇ ಆಧರಿಸಿ ಅನೇಕ ಕುಟುಂಬ ಜೀವನ ನಡೆಸುತ್ತಿವೆ. ಈಗಿರುವ ಜಾಗವನ್ನು ಬಾಡಿಗೆ ರೂಪದಲ್ಲಿ ವ್ಯಾಪಾರಸ್ಥರಿಗೆ ನೀಡಬೇಕು. ಅಲ್ಲದೇ ಈ ಸ್ಥಳಕ್ಕೆ ಮೂಲ ಸೌಕರ್ಯಗಳನ್ನು ಎಪಿಎಂಸಿ ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಲಾಗಿದೆ.
ಸಮಿತಿಯ ಪ್ರಮುಖರಾದ ಕೆ.ಮರಿಯಪ್ಪ, ಸೋಮನಾಥ ಸೂಲಂಗಿ, ಮುಕ್ತಾರ್ ಪಟೇಲ್, ಜಾವೀದ್‌ಖಾದ್ರಿ, ನಾಸೀರ್ ಅಲಿಸಾಬ್, ಮೌಲಾಸಾಬ್, ಮೋಹಿನ್‌ಪಾಷಾ, ನಾಸೀರ್‌ಪಾಷಾ ಅಬ್ದುಲ್ ರೆಹಮಾನ್, ರಸೂಲ್‌ಸಾಬ್, ರೋಷನ್ ಜಮೀರ್, ರಸೂಲ್‌ಸಾಬ್, ಮೊಹ್ಮದ್ ಶಫೀ, ಹಬೀಬ್ ಇದ್ದರು.