

ಸಿಂಧನೂರು: ತಾಲೂಕಿನಲ್ಲಿ ಇತ್ತೀಚೆಗೆ ವೈರಲ್ ಫೀವರ್ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಮುಂಜಾಗ್ರತಾ ಕ್ರಮವಹಿಸಿ, ರೋಗ ಹತೋಟಿಗೆ ತರೋಣ ಎಂದು ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಚಂದ್ರಶೇಖರಯ್ಯ ತಿಳಿಸಿದರು.
ನಗರದ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಬುಧವಾರ ಭೇಟಿ ನೀಡಿ, ಮಕ್ಕಳ ಆರೋಗ್ಯ ವಿಚಾರಿಸಿ ಮಾತನಾಡಿದರು. ಸೊಳ್ಳೆ ಹಾವಳಿ ತಪ್ಪಿಸಲು ಮತ್ತು ರಕ್ಷಣೆಗಾಗಿ ಸೊಳ್ಳೆ ಪರದೆ ಕಡ್ಡಾಯವಾಗಿ ಬಳಕೆ ಮಾಡಬೇಕು. ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು. ಮಳೆಯ ವಾತಾವರಣ ಇರುವುದರಿಂದ ಕೆಮ್ಮ, ನೆಗಡಿ ಪ್ರಕರಣ ಬೆಳಕಿಗೆ ಬಂದಿವೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ಮಾತನಾಡಿ, ತಾಲೂಕಿನಾದ್ಯಂತ ಪ್ರತಿ ಮುಂಗಾರು, ಹಿಂಗಾರಿನಲ್ಲಿ ಬರುವ ಮಳೆಯು ಈ ವರ್ಷ ವಾಡಿಕೆಗಿಂತ ಹೆಚ್ಚು ಸುರಿದಿದೆ. ಇದರಿಂದ ವಾತವಾರಣದಲ್ಲಿ ಅನೇಕ ಬದಲಾವಣೆಯಿಂದ ವೈರಲ್ ಫೀವರ್‌ಗೆ ಸಂಭಂದಿಸಿದ ವೈರಾಣುಗಳು ಹೆಚ್ಚಾಗುವುದು ಸಾಮಾನ್ಯ. ಸಾಮಾನ್ಯವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಲಕ್ಷಣಗಳು ಬರುತ್ತಿವೆ. ಖಾಸಗಿ ಆಸ್ಪತ್ರೆಗಳಲ್ಲಿನ ಹೆಚ್ಚಿನ ಜ್ವರ ಪ್ರಕರಣಗಳು ಇದ್ದು ತಾಲೂಕಿನ ಪ್ರಕರಣ ಕಡಿಮೆ ಇವೆ. ಕುಷ್ಟಗಿ, ಲಿಂಗಸುಗೂರ, ದೇವದುರ್ಗಾ, ಮಸ್ಕಿ, ಮಾನ್ವಿ ಮತ್ತು ಯಾದಗಿರಿ, ಕಾರಟಗಿ, ಕನಕಗಿರಿ ತಾಲೂಕಿನವರಾಗಿದ್ದಾರೆಂದು ಮಾಹಿತಿ ನೀಡಿದರು. ಆರೋಗ್ಯ ಮೇಲ್ವಿಚಾರಕರಾದ ರಂಗನಾಥ ಗುಡಿ, ಸಂಗನಗೌಡ, ಎಫ್.ಎ.ಹಣಗಿ, ನಿಖಿಲ್ ಇದ್ದರು.