

ಸಿಂಧನೂರು: ಬೆಂಬಲ ಬೆಲೆ ಯೋಜನೆಯಡಿ ಜೋಳದ ಖರೀದಿ ಮಿತಿ ಹೆಚ್ಚಿಸಲು ಸರ್ಕಾರದ ಮೇಲೆ ಈಗಾಗಲೇ ಒತ್ತಡ ಹಾಕಿರುವೆ. ಈ ಕುರಿತ ಪ್ರಯತ್ನ ಮುಂದುವರಿಸುವೆ ಎಂದು ಶಾಸಕ ವೆಂಕಟರಾವ ನಾಡಗೌಡ ಹೇಳಿದರು.
ನಗರದ ನಿವಾಸಕ್ಕೆ ಭಾನುವಾರ ಆಗಮಿಸಿದ್ದ ರೈತರೊಂದಿಗೆ ಚರ್ಚಿಸಿ ಮಾತನಾಡಿದರು. ಕಳೆದ ವರ್ಷದಂತೆ ಯಾವುದೇ ಮಿತಿ ಇಲ್ಲದೆ ಜೋಳ ಖರೀದಿಸಬೇಕೆಂದು ಸದನದಲ್ಲಿ ಒತ್ತಾಯಿಸಿರುವೆ. ಪರಿಶೀಲಿಸಿ, ಕ್ರಮಕೈಗೊಳ್ಳುವ ಭರವಸೆ ಸಿಕ್ಕಿತ್ತು. ತಾಲೂಕಿನಲ್ಲಿ ಜೋಳದ ಫಸಲು ಕಟಾವಿಗೆ ಬಂದಿರುವುದರಿಂದ ರೈತರು ಖರೀದಿ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಸರ್ಕಾರ ಮಿತಿ ಹಾಕಿರುವುದರಿಂದ ರೈತರಿಗೆ ಅನುಕೂಲವಾಗುವುದಿಲ್ಲ. ಎಕರೆಗೆ 30 ಕ್ವಿಂಟಲ್ ಜೋಳದ ಫಸಲು ಬಂದಿದ್ದು, ಒಬ್ಬ ರೈತನಿಂದ 20 ಕ್ವಿಂಟಲ್ ಖರೀದಿ ಮಾಡುವುದು ಅವೈಜ್ಞಾನಿಕವಾಗಿದೆ. ರೈತರು ಸಂಕಷ್ಟದಲ್ಲಿದ್ದು, ಖರೀದಿ ಮಿತಿ ಬದಲಾಯಿಸಬೇಕು ಎಂದು ಆಗ್ರಹಿಸಿದರು. ತಾಪಂ ಮಾಜಿ ಸದಸ್ಯ ಚಂದ್ರಭೂಪಾಲ ನಾಡಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ, ವೆಂಕಟೇಶ ನಂಜಲದಿನ್ನಿ ಇದ್ದರು.