

ಸಿಂಧನೂರು: ವಸತಿ ರಹಿತ ಅಸಂಘಟಿತ ಕಾರ್ಮಿಕರಾದ ಆಸ್ಪತ್ರೆ, ಮನೆಗೆಲಸ, ಟೇಲರಿಂಗ್ ಹಾಗೂ ಎಪಿಎಂಸಿಯಲ್ಲಿ ಲೈಸೆನ್ಸ್ ಹೊಂದಿದ ಹಮಾಲರಿಗೆ ನಿವೇಶನ ಹಾಗೂ ವಸತಿ ಸೌಲಭ್ಯ ಒದಗಿಸಲು ಒತ್ತಾಯಿಸಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾ ಸಮಿತಿ ನಗರಸಭೆ ಕಂದಾಯ ಯೋಜನಾಧಿಕಾರಿ ಮಾಧುರಿಗೆ ಗುರುವಾರ ಮನವಿ ಸಲ್ಲಿಸಿತು.
ಎಪಿಎಂಸಿಯಲ್ಲಿ ಲೈಸೆನ್ಸ್ ಹೊಂದಿದ ಹಮಾಲರು, ಮಹಿಳೆಯರು 2018 ರಲ್ಲಿ ಒಟ್ಟು 211 ಜನರ ನಿವೇಶನ ರಹಿತರ ವೈಯಕ್ತಿಕ ಅರ್ಜಿಗಳನ್ನು ಈಗಾಗಲೇ ನಗರಸಭೆ ಕಚೇರಿಗೆ ಸಲ್ಲಿಸಲಾಗಿದೆ. ಮನೆ-ಮನೆ ಸಮೀಕ್ಷೆ ನಡೆಸಿ ಪಟ್ಟಿ ತಯಾರಿಸಿ ಸಭೆ ಮಂಡಿಸಲು ಸೂಚಿಸುವ ಮೂಲಕ ನಿರ್ಣಯ ಕೈಗೊಳ್ಳಲಾಗಿದೆ. ಆದರೆ, ಅರ್ಜಿ ಬಗ್ಗೆ ಯಾವ ಕ್ರಮ ಕೈಗೊಂಡಿದ್ದಿರೆಂದು ಇದುವರೆಗೆ ತಿಳಿದಿಲ್ಲ. ಅಸಂಘಟಿತ ಮಹಿಳಾ ಕಾರ್ಮಿಕರಾದ ಮನೆಗೆಲಸ, ಖಾಸಗಿ ಆಸ್ಪತ್ರೆ, ಶಾಲಾ-ಕಾಲೇಜ್‌ಗಳಲ್ಲಿ ಸ್ವಚ್ಛತೆ ಹಾಗೂ ಟೇಲರಿಂಗ್ ಮಾಡುವಂತ ಮಹಿಳೆಯರು ಆಶ್ರಯ ಇಲ್ಲದೆ ಮತ್ತು ಸರ್ಕಾರದ ಯಾವುದೇ ಸೌಲಭ್ಯ ಪಡೆಯದೆ ಬದುಕಿಗಾಗಿ ಹಗಲಿರಳು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.