400 ವಿದ್ಯಾರ್ಥಿನಿಯರಿಗೆ ಇಬ್ಬರೇ ಉಪನ್ಯಾಸಕರು !

UNTILETED (5)
Published on

ಸಿಂಧನೂರು: ನಗರದ ಕುಷ್ಟಗಿ ರಸ್ತೆ ಮಾರ್ಗದಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್‌ನಲ್ಲಿ 400 ವಿದ್ಯಾರ್ಥಿನಿಯರಿಗೆ ಇಬ್ಬರೇ ಕಾಯಂ ಉಪನ್ಯಾಸಕರಿದ್ದು, ವಿದ್ಯಾರ್ಥಿಗಳಿಗೆ ಬೋಧನೆ ಸಮಸ್ಯೆಯಾಗಿದೆ.

ಇಬ್ಬರಲ್ಲಿ ಕನ್ನಡ ಉಪನ್ಯಾಸಕರು ಪ್ರಭಾರ ಪ್ರಾಚಾರ್ಯರ ಹುದ್ದೆ ನಿರ್ವಹಿಸುತ್ತಿದ್ದು, ಅತಿಥಿ ಉಪನ್ಯಾಸಕರ ನೇಮಕವು ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಕಳೆದ ವರ್ಷ ಈ ಮಹಾವಿದ್ಯಾಲಯದಲ್ಲಿ ಕಾಯಂ ನಾಲ್ಕು ಜನ ಉಪನ್ಯಾಸಕರು, 27 ಅತಿಥಿ ಉಪನ್ಯಾಸಕರು ಕಾರ್ಯಭಾರ ಮಾಡಿದ್ದರಿಂದ ಪಾಠ ಪ್ರವಚನಕ್ಕೆ ತೊಂದರೆ ಆಗಿರಲಿಲ್ಲ. ಈ ಬಾರಿ ಕಾಯಂ ಉಪನ್ಯಾಸಕರಿದ್ದು ಬಿಎ, ಬಿಕಾಂ, ಬಿಎಸ್ಸಿ ವಿಭಾಗದಲ್ಲಿ 400 ಕ್ಕೂ ಅಧಿಕ ವಿದ್ಯಾರ್ಥಿನಿಯರು ಪ್ರವೇಶ ಪಡೆದುಕೊಂಡಿದ್ದಾರೆ. ಮೊದಲಿನ ಪ್ರಾಚಾರ್ಯರು ಬೇರೆಡೆ ವರ್ಗಾವಣೆಯಾಗಿದ್ದು ಇನ್ನೊಬ್ಬ ಉಪನ್ಯಾಸಕರು ನಿವೃತ್ತಿಯಾಗಿದ್ದಾರೆ. ಈಗ ಉಳಿದಿರುವುದು ಇಬ್ಬರೇ ಉಪನ್ಯಾಸಕರು, ಅದರಲ್ಲಿ ಒಬ್ಬರು ಪ್ರಭಾರ ಪ್ರಾಚಾರ್ಯರ ಹುದ್ದೆ ನಿರ್ವಹಿಸಬೇಕಿದೆ. ಒಬ್ಬರೇ ಉಪನ್ಯಾಸಕರು ಮೂರು ವಿಭಾಗದ ವಿದ್ಯಾರ್ಥಿನಿಯರನ್ನು ಸಂಭಾಳಿಸಬೇಕಿದೆ. ತರಗತಿ ಆರಂಭಗೊಂಡ ತಿಂಗಳಾಗುತ್ತಾ ಬಂದರೂ, ಉಪನ್ಯಾಸಕರೇ ಇಲ್ಲ. ನಿತ್ಯಲೂ ಮಹಾವಿದ್ಯಾಲಯಕ್ಕೆ ಬಂದು ವಿದ್ಯಾರ್ಥಿಗಳು ಉಪನ್ಯಾಸಕರಿಲ್ಲದೇ ವಾಪಾಸ್ ಆಗುವಂತಾಗಿದೆ.

ಜಿಲ್ಲೆಯಲ್ಲಿ ಮಹಿಳಾ ಮಹಾವಿದ್ಯಾಲಯಕ್ಕೆ ಹೆಚ್ಚು ಪ್ರವೇಶ ಪಡೆದುಕೊಳ್ಳುತ್ತಿದ್ದರೂ ಆಯಾ ವಿಷಯಕ್ಕೆ ಒಬ್ಬರೂ ಉಪನ್ಯಾಸಕರಿಲ್ಲದಿರುವುದು ದುರಂತವೇ ಸರಿ. ಈ ಹಿಂದೆ ಹಲವು ವರ್ಷಗಳು ಕಟ್ಟಡ ಸಮಸ್ಯೆ ಎದುರಿಸಿದ್ದು ಈಗ ಸುಸಜ್ಜಿತ ಕಟ್ಟಡ, ಪೀಠೋಪಕರಣಗಳನ್ನು ಹೊಂದಿದ್ದರೂ, ತರಗತಿಯಲ್ಲಿ ಬೋಧಿಸಲು ಉಪನ್ಯಾಸಕರಿಲ್ಲ. ಇದರಿಂದ ಕೆಲ ವಿದ್ಯಾರ್ಥಿನಿಯರು ಬೇಸತ್ತು ಪ್ರವೇಶಾತಿ ರದ್ದುಗೊಳಿಸಿ, ಬೇರೆ ಕಾಲೇಜ್‌ಗೆ ಹೋಗುತ್ತೇವೆಂದು ಹೇಳುತ್ತಿದ್ದಾರೆ. ಈ ಸಮಸ್ಯೆ ಬೆಳಕು ಚೆಲ್ಲಲು ಕಳೆದ ವಾರ ವಿದ್ಯಾರ್ಥಿನಿಯರೆಲ್ಲ ಮಹಾವಿದ್ಯಾಲಯ ಆವರಣದಲ್ಲಿ ದಿನಪೂರ್ತಿ ಹೋರಾಟ ಮಾಡಿದ್ರೂ ಪ್ರಯೋಜನ ಮಾತ್ರ ಶೂನ್ಯ ಸ್ಥಿತಿಯಲ್ಲಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.

============

ಬಿಕಾಂ, ಬಿಎಸ್ಸಿ ಪಾಠ ಇಲ್ಲ

ಈಗಿರುವ ಪ್ರಭಾರ ಪ್ರಾಚಾರ್ಯ, ಕನ್ನಡ ವಿಷಯ ಬೋಧಿಸುತ್ತಿದ್ದು ಇನ್ನೊಬ್ಬರು ಸಮಾಜ ಶಾಸ್ತ್ರ ಬೋಧನೆ ಮಾಡುತ್ತಿದ್ದಾರೆ. ಕಲಾ ವಿಭಾಗದ ಎರಡು ತರಗತಿ ನಡೆದರೆ, ಇನ್ನೂ ನಾಲ್ಕು ತರಗತಿಗೆ ಬೋಧನೆ ಮಾಡಲು ಉಪನ್ಯಾಸಕರಿಲ್ಲ. ಇನ್ನೂ ಬಿಕಾಂ, ಬಿಎಸ್ಸಿ ವಿದ್ಯಾರ್ಥಿನಿಯರಿಗೆ ಪಾಠಲು ಒಬ್ಬ ಉಪನ್ಯಾಸಕರು ಇಲ್ಲ. ಆರು ವಿಷಯಗಳಿಗೆ ಉಪನ್ಯಾಸಕರು ಬೇಕಿದೆ. ಈಗಾಗಲೇ ತರಗತಿ ಆರಂಭಗೊಂಡು ತಿಂಗಳು ಗತಿಸಿದ್ದೂ, ಎರಡ್ಮೂರು ಪಾಠ, ಪದ್ಯಗಳು ಮುಗಿಯಬೇಕಿದ್ದು ಬೇರೆಡೆ ಈಗಾಗಲೇ ತರಗತಿ ಆರಂಭಿಸಿ, ಪಾಠ-ಪ್ರವಚನ ನಡೆದಿವೆ. ಇಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿನಿಯರು ಉಪನ್ಯಾಸಕರೇ ಇಲ್ಲದೇ ಗೋಳಾಡುವಂತಾಗಿದೆ.

=============

ಅತಿಥಿ ಉಪನ್ಯಾಸಕರೇ ಆಧಾರ

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಆರಂಭದಿಂದಲೂ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದು ಕಾಯಂ ಬೆರಳೆಣಿಕೆ ಇದ್ದರೆ, 27 ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ವಿವಿಧ ವಿಷಯಗಳನ್ನು ಬೋಧಿಸುತ್ತಾರೆ. ಸರ್ಕಾರದಲ್ಲಿ ನಡೆದಿರುವ ಅತಿಥಿ ಉಪನ್ಯಾಸಕರ ಆಯ್ಕೆಗೊಂದಲ ಇನ್ನೂ ಮುಂದುವರೆದಿದ್ದು ಇದರಿಂದ ತಿಂಗಳಿಂದ ವಿದ್ಯಾರ್ಥಿನಿರಿಗೆ ಬೋಧಕರಿಲ್ಲದಂತಾಗಿದೆ. ಮಹಾವಿದ್ಯಾಲಯದಲ್ಲಿ ಬಿಕಾಂ, ಬಿಎಸ್ಸಿಗೆ ಸಂಪೂರ್ಣ ಅತಿಥಿ ಉಪನ್ಯಾಸಕರನ್ನೇ ನಂಬಿಕೊಳ್ಳಲಾಗಿದೆ. ಕಲಾ ವಿಭಾಗದ ನಾಲ್ಕು ವಿಷಯಗಳಿಗೂ ಅತಿಥಿ ಉಪನ್ಯಾಸಕರು ಬೇಕಿದೆ. ಆದರೆ, ಸರ್ಕಾರ ಬೇಗನೆ ನೇಮಕ ಮಾಡಿಕೊಂಡು ಕಾರ್ಯಭಾರ ವಹಿಸಿದ್ದರೆ ಈ ಸಮಸ್ಯೆಯೇ ತಲೆದೋರುತ್ತಿರಲಿಲ್ಲ. ಸರ್ಕಾರದ ನೇಮಕ ವಿಳಂಬ ನೀತಿ ನೇರವಾಗಿ ವಿದ್ಯಾರ್ಥಿಗಳ ಮೇಲೆ ಬೀರಿದೆ. ಮುಂದಿನ ಶಿಕ್ಷಣಕ್ಕೂ ಪೆಟ್ಟು ಬೀಳಲಿದೆ. ಕೂಡಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಸಮಸ್ಯೆಗೆ ಇತ್ಯರ್ಥಗೊಳಿಸಬೇಕೆಂಬುದು ವಿದ್ಯಾರ್ಥಿನಿಯರ ಒತ್ತಾಸೆಯಾಗಿದೆ.

==============

ಕೋಟ್

ಈ ಮೊದಲು ನಾಲ್ವರು ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವು. ಈಗ ಒಬ್ಬರು ವರ್ಗಾವಣೆ ಪಡೆದಿದ್ದು ಇನ್ನೊಬ್ಬರು ನಿವೃತ್ತಿಯಾಗಿದ್ದಾರೆ. ಇಬ್ಬರು ಉಪನ್ಯಾಸಕರು ಉಳಿದುಕೊಂಡಿದ್ದು ನಾನು ಕನ್ನಡ ವಿಷಯ ಉಪನ್ಯಾಸಕ, ಪ್ರಭಾರ ಪ್ರಾಚಾರ್ಯರ ಹುದ್ದೆ ನಿರ್ವಹಿಸುತ್ತಿರುವೆ. ತೊಂದರೆಯಾಗಬಾರದೆಂದು ವಿಷಯ ಬೋಧನೆ ಮಾಡುತ್ತಿರುವೆ. ಇನ್ನೊಬ್ಬರು ಸಮಾಜಶಾಸ್ತ್ರ ಬೋಧನೆ ಮಾಡುತ್ತಿದ್ದಾರೆ. ಪಾಠ ಮಾಡಲು ಉಪನ್ಯಾಸಕರ ಅವಶ್ಯಕತೆ ಇದ್ದು, ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ.

ಮಹಾಂತೇಶ

ಪ್ರಭಾರ ಪ್ರಾಚಾರ್ಯ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net