2ಎ ಮೀಸಲಾತಿ ಸಿಗುವವರೆಗೆ ಹೋರಾಟ ನಿಲ್ಲಲ್ಲ ; ಬಸವ ಜಯಮೃತ್ಯುಂಜಯ ಸ್ವಾಮೀಜಿ ಸ್ಪಷ್ಟನುಡಿ

Sindhanour Kittoor Rani Channamma circle unveiling
ಸಿಂಧನೂರಿನಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಅನಾವರಣ ಹಾಗೂ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ್ ಬೆಲ್ಲದ್ ಉದ್ಘಾಟಿಸಿದರು. ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೆಂಕಟಗಿರಿಕ್ಯಾಂಪ್‌ನ ಸಿದ್ದಾಶ್ರಮದ ಸದಾನಂದ ಶರಣರು, ಜಂಗಮರಹಳ್ಳಿ ಚಂದ್ರಮೌನೇಶ ತಾತ, ಕೊಪ್ಪಳ ಮಾಜಿ ಸಂಸದ ಸಂಗಣ್ಣ ಕರಡಿ ಇತರರಿದ್ದರು.
Published on

ಸಿಂಧನೂರು: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಹಿಂದಿನ ಬಿಜೆಪಿ ಸರ್ಕಾರದಿಂದ ಸಿಕ್ಕಷ್ಟು ಸ್ಪಂದನೆ ಈಗಿನ ಸರ್ಕಾರದಿಂದ ಸಿಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ನಮ್ಮ ಹೋರಾಟವನ್ನು ಕಡೆಗಣಿಸಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಉದ್ಘಾಟನೆ ಹಾಗೂ ಚನ್ನಮ್ಮ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ರಾಣಿ ಚನ್ನಮ್ಮ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಈ ಹಿಂದೆ ಕಿತ್ತೂರು, ಬೆಳಗಾವಿಗೆ ಸೀಮಿತಗೊಂಡ ಕಿತ್ತೂರು ರಾಣಿ ಚನ್ನಮ್ಮರನ್ನು ಇಡೀ ದೇಶವೇ ಗೌರವಿಸುತ್ತಿದೆ. ಸಂಸತ್ತಿನಲ್ಲಿ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರಕ್ಕೂ ಪ್ರಧಾನಿ ಗೌರವ ಸಲ್ಲಿಸುವಂತಾಗಬೇಕು ಎಂದರು.

ಸಮುದಾಯ ಸಂಘಟನೆಯಾಗಬೇಕಿದ್ದು, 2ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ. ಯಾವುದೇ ಸರ್ಕಾರವಿದ್ದರೂ ನಮ್ಮ ಹಕ್ಕು ನಮಗೆ ನೀಡಬೇಕು. ಈ ಕುರಿತ ಹೋರಾಟ ತೀವ್ರಗೊಳಿಸುವ ಹಿನ್ನೆಲೆಯಲ್ಲಿ ಸೆ.22 ರಂದು ಬೆಳಗಾವಿಯಲ್ಲಿ ವಕೀಲರ ಪ್ರಥಮ ರಾಜ್ಯ ಪ್ರಥಮ ಸಮಾವೇಶ ಆಯೋಜಿಸಲಾಗಿದೆಂದು ತಿಳಿಸಿದರು.

ಹುಬ್ಬಳ್ಳಿ-ಧಾರವಾಡ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, 2 ಎ ಮೀಸಲಾತಿ ನೀಡಿದರೆ ಸಮುದಾಯದ ಏಳಿಗೆಯಾಗಲಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ ಧೋರಣೆ ಸರಿಯಲ್ಲ ಎಂದರು.

ಯದ್ದಲದೊಡ್ಡಿ ಮಹಾಲಿಂಗಸ್ವಾಮೀಜಿ, ರಂಭಾಪುರಿ ಶಾಖಾಮಠದ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ವೆಂಕಟಗಿರಿಕ್ಯಾಂಪ್‌ನ ಸಿದ್ದಾಶ್ರಮದ ಸದಾನಂದ ಶರಣರು, ಜಂಗಮರಹಳ್ಳಿ ಚಂದ್ರಮೌನೇಶ ತಾತ, ಕೊಪ್ಪಳ ಮಾಜಿ ಸಂಸದ ಸಂಗಣ್ಣ ಕರಡಿ, ಶಾಸಕ ಹಂಪನಗೌಡ ಬಾದರ್ಲಿ, ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಎಂಎಲ್‌ಸಿ ಬಸನಗೌಡ ಬಾದರ್ಲಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ, ಮುಖಂಡ ಲಕ್ಷ್ಮಣ ನಿರಾಣಿ, ಕಾಂಗ್ರೆಸ್ ಮುಖಂಡ ದೊಡ್ಡಬಸನಗೌಡ ಬಾದರ್ಲಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರ ಪಾಟೀಲ್, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪಂಪನಗೌಡ ತಾವರಗೇರಾ, ಜಿಪಂ ಮಾಜಿ ಸದಸ್ಯ ಬಸವರಾಜ ಹಿರೇಗೌಡ್ರ, ಮಲ್ಲಿಕಾರ್ಜುನಗೌಡ ಕಲ್ಲೂರು, ಪ್ರಮುಖರಾದ ವೀರಭದ್ರಪ್ಪ ಗಸ್ತಿ, ಕಲ್ಯಾಣಪ್ಪ ಹಿರೇಗೌಡ್ರ, ಸಿದ್ದರಾಮೇಶ ಮನ್ನಾಪುರ, ಡಾ.ಕೆ.ಬಸವರಾಜ ಕುಷ್ಟಗಿ, ಸೋಮನಗೌಡ ಪಾಟೀಲ್, ಬಸನಗೌಡ ಬುಕ್ಕನಹಟ್ಟಿ ಇತರರು ಇದ್ದರು. ಇದಕ್ಕೂ ಮುನ್ನ ನಗರದ ಅಂಬಾದೇವಿ ದೇವಸ್ಥಾನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಕುಂಭ-ಕಳಸ, ಕಲಾತಂಡಗಳೊಂದಿಗೆ ಕಿತ್ತೂರು ರಾಣಿ ಚನ್ನಮ್ಮ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net